HomeGadag Newsನಗರಸಭೆ ಆಸ್ತಿ ಪರಭಾರೆಗೆ ಹುನ್ನಾರ : ಎಲ್.ಡಿ. ಚಂದಾವರಿ

ನಗರಸಭೆ ಆಸ್ತಿ ಪರಭಾರೆಗೆ ಹುನ್ನಾರ : ಎಲ್.ಡಿ. ಚಂದಾವರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅವಳಿ ನಗರದ ಹೃದಯಭಾಗದಲ್ಲಿರುವ 34 ಎಕರೆ ವಕಾರಸಾಲು ಪ್ರದೇಶವನ್ನು 54 ಜನರಿಗೆ ಪರಭಾರೆ ನೀಡಲು ಬಿಜೆಪಿ ಆಡಳಿತ ಮಂಡಳಿ ನಕಲಿ ಠರಾವು ಮಾಡಿದೆ. ಈ ಬಗ್ಗೆ ಪ್ರಭಾರ ಪೌರಾಯುಕ್ತರು ನೀಡಿರುವ ದೂರು ಇದಕ್ಕೆ ಸಾಕ್ಷಿಯಾಗಿದೆ ಎಂದು ಗದಗ-ಬೆಟಗೇರಿ ನಗರಸಭೆ ಪ್ರತಿಪಕ್ಷ ನಾಯಕ ಎಲ್.ಡಿ. ಚಂದಾವರಿ ಆರೋಪಿಸಿದರು.

ಶುಕ್ರವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟನ್ ಮಾರ್ಕೆಟ್ ಅಸೋಸಿಯೇಶನ್ 54 ಮಳಿಗೆಗಳ ಸಂಘದ ಸದಸ್ಯರು ಅರ್ಜಿ ಸಲ್ಲಿಸಿ, ವಕಾರಸಾಲು ಲೀಸ್ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಅದನ್ನು ಆಧರಿಸಿ ಬಿಜೆಪಿ 2024ರ ಫೆಬ್ರವರಿ 9ರಂದು ನಡೆದ ಸಾಮಾನ್ಯ ಸಭೆಯಲ್ಲಿ 378ನೇ ಠರಾವು ಸೃಷ್ಟಿಸಿದ್ದಾರೆ. ಅದಕ್ಕೆ ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮೂಶಿಗೇರಿ ಸೂಚಕರು, ಅನುಮೋದಕರಾಗಿ ಸಹಿ ಮಾಡಿದ್ದಾರೆ. ಅಧ್ಯಕ್ಷರು ಮತ್ತು ಪೌರಾಯುಕ್ತರು ಸಹಿ ಮಾಡಿದ್ದಾರೆ.

ಆದರೆ ಸದ್ಯ ಪ್ರಭಾರ ಪೌರಾಯುಕ್ತರಾಗಿದ್ದ ಪ್ರಶಾಂತ ವರಗಪ್ಪನವರ ಅವರು ತಮ್ಮ ಸಹಿ ನಕಲಿಯಾಗಿದ್ದು, ತಮ್ಮ ಅಧಿಯಯಲ್ಲಿ ಒಂದೇ ಒಂದು ಸಾಮಾನ್ಯ ಸಭೆ ನಡೆದಿದೆ. ಆ ಸಭೆಯಲ್ಲಿ ವಕಾರಸಾಲು ಲೀಸ್ ಕೊಡಬೇಕು ಎನ್ನುವ ಬಗ್ಗೆ ಯಾವುದೇ ಚರ್ಚೆ, ತೀರ್ಮಾನ ಆಗಿಲ್ಲ. ನಕಲಿ ಠರಾವು ಸೃಷ್ಟಿಸಿ ನಗರಸಭೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನಗರಸಭೆ ಅಧ್ಯಕ್ಷರು ಸೇರಿದಂತೆ ಐದು ಜನರ ಮೇಲೆ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿರುವುದು ಠರಾವು ನಕಲಿ ಎನ್ನುವುದಕ್ಕೆ ಸ್ಪಷ್ಟ ದಾಖಲೆಯಾಗಿದೆ ಎಂದರು.

2024ರ ಫೆಬ್ರವರಿ 2ರಂದು ನಡೆದ ಸಾಮಾನ್ಯ ಸಭೆಯಲ್ಲಿ 16 ವಿಷಯಗಳ ಪ್ರಸ್ತಾಪವಾಗಿದೆ. ಮತ್ತು ಠರಾವು ಸಂಖ್ಯೆ 374ಕ್ಕೆ ಅಂತ್ಯಗೊಳ್ಳುತ್ತದೆ. ಆದಾಗ್ಯೂ 378 ಠರಾವು ಹೇಗೆ ಬಂತು? ಇನ್ನು 17-7-2024ರಂದು ನಡೆದ ಸಾಮಾನ್ಯ ಸಬೆಯಲ್ಲಿ 378 ಠರಾವು ಸಂಖ್ಯೆಯ ಪ್ರಸ್ತಾಪವಿದೆ. ಅದರ ಪ್ರಕಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪರಿಶೀಲನೆ ಮಾಡುವ ನಿರ್ಣಯವಿದೆ. ಅಂದರೆ ಸದ್ಯ ಸೃಷ್ಟಿಯಾಗಿರುವ ಠರಾವು ನಕಲಿ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಸದ್ಯ ನಗರಸಭೆ ದಾಖಲೆಗಳು, ಠರಾವುಗಳನ್ನು ಪರಿಶೀಲನೆ ಮಾಡಿದಾಗ 54 ಜನರಿಗೆ ವಕಾರಸಾಲು ಲೀಸ್ ಕೊಡುವ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು ತಿಳಿಸಿದರು.

ನಗರಸಭೆ ಬಿಜೆಪಿ ಆಡಳಿತ ಮಂಡಳಿಯ ಈ ನಕಲಿ ಠರಾವು ವಿರುದ್ಧ ಈಗಾಗಲೇ ಪ್ರಭಾರ ಪೌರಾಯುಕ್ತರು ಕಾನೂನು ಹೋರಾಟ ನಡೆಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು, ಸಾರ್ವಜನಿಕ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಚಂದ್ರು ಕರಿಸೋಮನಗೌಡ್ರ, ಬರಕತ್‌ಅಲಿ ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಗರಸಭೆ ಆಸ್ತಿಯನ್ನು ಮನಬಂದಂತೆ ಲೀಸ್ ಕೊಡಲು ಸಾಧ್ಯವಿಲ್ಲ. 2019ರಲ್ಲಿ ನಗರಾಭಿವೃದ್ಧಿ ಇಲಾಖೆ ಕಾಯಿದೆ ಪ್ರಕಾರ ಲೀಸ್ ಕೊಡುವ ಬಗ್ಗೆ ಚರ್ಚೆಯಾಗಬೇಕು. ಬಹಿರಂಗವಾಗಿ ಲೀಲಾವು ಮಾಡಬೇಕು. ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅನುಕೂಲ ಆಗುವಂತೆ ಬಹಿರಂಗ ಹರಾಜಿನ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಅಂಥ ಯಾವುದೇ ನಿಯಮ ಪಾಲಿಸದೆ ಠರಾವು ಮಾಡಿ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಪರಾಭಾರೆ ಮಾಡುವ ಹುನ್ನಾರ ನಡೆಸಿದ್ದಾರೆ.
– ಎಲ್.ಡಿ. ಚಂದಾವರಿ.
ನಗರಸಭೆ ಪ್ರತಿಪಕ್ಷ ನಾಯಕ.

ನಕಲಿ ಠರಾವಿನಲ್ಲಿ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. 22,500 ಚದರ್ ಅಡಿ ಜಾಗಕ್ಕೆ ವಾರ್ಷಿಕ 14 ಸಾವಿರ ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಅಂದರೆ ದಿನವೊಂದಕ್ಕೆ 50 ಪೈಸೆಗಿಂತ ಕಡಿಮೆ ಬಾಡಿಗೆ ಪಡೆಯುವ ನಿರ್ಣಯವಾಗಿದ್ದು, 2024 ಜುಲೈ 22ರಂದು ಹಸ್ತಾಂತರಿಸಿದ್ದೇವೆ ಎಂದು ನಿರ್ಣಯಿಸಿದ್ದಾರೆ. ಜಮೀನು ಖರೀದಿ ನೀಡಿದಾಗ ಮಾತ್ರ ಆ ರೀತಿ ಹಸ್ತಾಂತರಿಸುವ ನಿರ್ಣಯ ಕೈಗೊಳ್ಳಬಹುದು ಎನ್ನುವುದನ್ನು ಮರೆತಂತಿದೆ ಎಂದು ಎಲ್.ಡಿ. ಚಂದಾವರಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!