HomeBengaluru Newsಇಂದಿನಿಂದ ವಿಧಾನಮಂಡಲದ ಅಧಿವೇಶನ: ಕದನಕ್ಕೆ ಕಣ ಸಜ್ಜು!

ಇಂದಿನಿಂದ ವಿಧಾನಮಂಡಲದ ಅಧಿವೇಶನ: ಕದನಕ್ಕೆ ಕಣ ಸಜ್ಜು!

For Dai;y Updates Join Our whatsapp Group

Spread the love

ಬೆಂಗಳೂರು:- ಇಂದಿನಿಂದ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭಗೊಳ್ಳಲಿದ್ದು, ಜಂಟಿ ಸಮರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಪಕ್ಷಗಳು ಸಿದ್ಧವಾಗಿವೆ.

ಈಗಾಗಲೇ ಸರಕಾರದ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಪಟ್ಟಿಯನ್ನು ಇರಿಸಿಕೊಂಡು ಚಾರ್ಜ್‌‌ಶೀಟ್‌ ಹಾಕಲು ಸರ್ವ ತಯಾರಿಯನ್ನೂ ಮಾಡಿ ಕೊಂಡಿರುವ ವಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಿರುವ ಎಲ್ಲ ರಣತಂತ್ರಗಳನ್ನು ಹೆಣೆದಿವೆ.

ಇದಕ್ಕೆ ತಿರುಗೇಟು ನೀಡುವುದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ತಾಲೀಮು ನಡೆಸಿದ್ದು, ವಿಪಕ್ಷಗಳಿಂದ ತೂರಿ ಬರಬಹುದಾದ ಅಸ್ತ್ರಗಳೇನು, ಅದಕ್ಕೆ ಯಾವ ಪ್ರತ್ಯಸ್ತ್ರವನ್ನು ಯಾರು ಹೂಡಬೇಕು, ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಸಚಿವರ ತಂಡವನ್ನು ಸಿದ್ಧಪಡಿಸಿದ್ದಾರೆ.

ಸರಕಾರದ ವಿರುದ್ಧ 6 ಪ್ರಮುಖ ಅಸ್ತ್ರಗಳನ್ನು ಪ್ರಯೋಗ ಮಾಡುವುದಕ್ಕೆ ಮಿತ್ರಪಕ್ಷಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಮುಡಾ ಅಕ್ರಮ ನಿವೇಶನ ಹಂಚಿಕೆ ವಿವಾದ ಸಿಎಂ ಸಿದ್ದರಾಮಯ್ಯ ಅವರ ಸುತ್ತಲೇ ತಿರುಗುತ್ತಿರುವುದರಿಂದ ಸದನದಲ್ಲಿ ಭಾರೀ ಗದ್ದಲ ನಡೆಯುವ ಸಾಧ್ಯತೆ ಇದೆ. ಜತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಬಿಜೆಪಿಗೆ ಮತ್ತೂಂದು ಅಸ್ತ್ರವನ್ನು ನೀಡಿದೆ.

ಅಧಿವೇಶನದ ಮೊದಲ ದಿನದಿಂದಲೇ ಸಮರ ಪ್ರಾರಂಭಿಸುವುದಕ್ಕೆ ವಿಪಕ್ಷಗಳು ಮುಂದಾ ಗಿರುವುದು ಸರಕಾರಕ್ಕೆ ತಲೆಬಿಸಿ ಸೃಷ್ಟಿಸಿದೆ.

ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಬೈರತಿ ಬಸವರಾಜ್‌, ಉಪನಾಯಕ ಅರವಿಂದ ಬೆಲ್ಲದ್‌, ಸಚೇತಕ ದೊಡ್ಡನಗೌಡ ಎಚ್‌. ಪಾಟೀಲ್‌, ಶಾಸಕ ವೇದವ್ಯಾಸ್‌ ಕಾಮತ್‌, ವಿಧಾನ ಪರಿಷತ್ತಿನಲ್ಲಿ ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ಛಲವಾದಿ ನಾರಾಯಣಸ್ವಾಮಿ, ಡಿ.ಎಸ್‌. ಅರುಣ್‌, ಶಶಿಲ್‌ ನಮೋಶಿ, ಎಸ್‌.ವಿ. ಸಂಕನೂರು, ಕೆ.ಎಸ್‌.ನವೀನ್‌ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ.
-ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆಪಾದನೆಯನ್ನು ಇಟ್ಟುಕೊಂಡು ಸರಕಾರಕ್ಕೆ ಚಾಟಿ
-ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ದುರ್ಬಳಕೆ, ಸೆಕ್ಷನ್‌ 7 (ಡಿ) ಬಗ್ಗೆ ಚರ್ಚೆ
-ಫ‌ಲಾನುಭವಿಗಳಿಗೆ ತಲುಪದ ಗ್ಯಾರಂಟಿ ಹಣ, ರಾಜ್ಯದ ಅಭಿವೃದ್ಧಿಗೆ ಹಿನ್ನಡೆ
-ನೇಹಾ ಹತ್ಯೆ ಸಹಿತ ಕಾನೂನು ಸುವ್ಯವಸ್ಥೆ ಕುಸಿತ, ಕೈಗಾರಿಕೆಗಳ ಪಲಾಯನ
-ಹಾಲಿನ ದರ ಏರಿಕೆ, ಪೆಟ್ರೋಲ್‌ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸೇರಿ ಒಟ್ಟಾರೆ ಬೆಲೆ ಏರಿಕೆ
-ಮಳೆ ಅವಾಂತರ, ಡೆಂಗ್ಯೂ ಸೇರಿ ಸಾಂಕ್ರಾಮಿಕ ರೋಗ ಹರಡುವಿಕೆ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!