HomeBengaluru Newsಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಘನತೆಗೆ ತಕ್ಕಂತೆ ವರ್ತಿಸಲಿ: ಡಿ.ಕೆ. ಶಿವಕುಮಾರ್

ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಘನತೆಗೆ ತಕ್ಕಂತೆ ವರ್ತಿಸಲಿ: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: “ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳು. ಅವರಿಗೊಂದು ಘನತೆ ಇದೆ. ಅದಕ್ಕೆ ತಕ್ಕಂತೆ ವರ್ತಿಸಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಕ್ಸ್ ಖಾತೆ ಮೂಲಕ ಯತೀಂದ್ರ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಎಂಬುವವರು ಪೊಲೀಸ್ ಅಧಿಕಾರಿ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಈ ರೀತಿ ಉತ್ತರಿಸಿದರು.

“ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟ್ನರ್ ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯೆ ನೀಡಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಅವರ ತಂದೆಯವರು ಅನೇಕ ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಕೇಳಿದೆ. ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಮುಖ್ಯಮಂತ್ರಿಗಳು. ಅವರುಗಳು ಇವರಂತೆ ಸುಮ್ಮ ಸುಮ್ಮನೆ ಮಾತನಾಡುತ್ತಾರಾ?

ದೇವರು, ಜನ ಕೊಟ್ಟ ಅವಕಾಶ, ಬೆಂಬಲಿಗರ ಸಹಾಯ, ತಂದೆ ತಾಯಿ ಆಶೀರ್ವಾದ, ತಮ್ಮದೇ ಆದ ಹೋರಾಟದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಮನಸ್ಸಿಗೆ ಬಂದಂತೆ ಈ ರೀತಿ ಮಾತನಾಡಿದರೆ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಮಾತು, ವರ್ತನೆ ಎಂದರೆ ನಾವು ಹೆದರಿ ಗಡ, ಗಡ ನಡಗುವಂತೆ ಇರಬೇಕು.

ನಮ್ಮ ಮಾಜಿ ಶಾಸಕ ಯತೀಂದ್ರ ಅವರು ತಮ್ಮ ತಂದೆಗಾಗಿ ಸ್ಥಾನ ತ್ಯಾಗ ಮಾಡಿದವರು. ನಾವು ಹಾಗೂ ನಮ್ಮ ಪಕ್ಷದ ಹೈಕಮಾಂಡ್ ಅವರನ್ನು ಎಂಎಲ್ ಸಿ ಮಾಡುತ್ತೇವೆ ಎಂದರೂ ಅದನ್ನು ಬೇಡ ಎಂದವರು. ಆತ ತಂದೆಯ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯನಾಗಿ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರಿಗೆ ನೂರಾರು ಕೆಲಸಗಳಿರುತ್ತವೆ. ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳ ವರ್ಗಾವಣೆ ಅರ್ಜಿ ಇಟ್ಟುಕೊಂಡು ಅನೇಕರು ಬರುತ್ತಾರೆ. ಹಾಗೆಂದು ಯತೀಂದ್ರ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಶಾಸಕರಲ್ಲದಿದ್ದರೂ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿ ಖುಷಿಪಡಬೇಕು. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ”.

ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಈ ವಿಚಾರ ಪ್ರಸ್ತಾಪ ಮಾಡಲೇಬೇಕು. ಈ ವಿಚಾರದ ಜತೆಗೆ ಅವರು ಇದುವರೆಗೂ ಜನತೆಗೆ ಕೊಟ್ಟ ಮಾತನ್ನು ಬಿಚ್ಚಿಟ್ಟು ಚರ್ಚೆ ಮಾಡಲಿ. ಪಕ್ಷದ ಅಧ್ಯಕ್ಷರಾಗಿ ಅವರಿಗೆ ವಿಚಾರ ಪ್ರಸ್ತಾಪಿಸುವ ಹಕ್ಕಿದೆ. ಅದನ್ನು ನಾನೇಕೆ ಕಿತ್ತುಕೊಳ್ಳಲಿ, ಬೇಡ ಎನ್ನಲಿ” ಎಂದು ತಿಳಿಸಿದರು. ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸಿರುವ ಬಗ್ಗೆ ಕೇಳಿದಾಗ, “ಇದು ಅವರ ಪಕ್ಷದ ವಿಚಾರ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ” ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!