ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸುವ ಗುರಿಯನ್ನು ಹೊಂದಿರಬೇಕು. ಏನು ಸಾಧಿಸಬೇಕೆನ್ನುವ ಕನಸನ್ನು ನೀವು ಈಗಿನಿಂದಲೇ ಹೊಂದಿರಬೇಕೆಂದು ಎಸ್.ಎ ಪ.ಪೂ ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಸಾಧನಾ ಕೋಚಿಂಗ್ ಸೆಂಟರ್‌ನ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಲಕರು ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ ನಿಮಗೆ ಕಲಿಯಲು ಎಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತಾರೆ. ಅದನ್ನು ನೀವು ಸಾರ್ಥಕಪಡಿಸಿಕೊಳ್ಳಬೇಕು. ಸಿನಿಮಾ ನಟನಟಿಯರು ನಿಮಗೆಂದಿಗೂ ಮಾದರಿಯಾಗಬಾರದು. ಬದಲಾಗಿ ಸುಧಾ ಮೂರ್ತಿ, ಅಬ್ದುಲ್‌ಕಲಾಂ ಇಂಥವರು ನಿಮಗೆ ಮಾದರಿಯಾಗಬೇಕು. ಅದಕ್ಕಾಗಿ ನಿಮ್ಮ ಬಿಡುವಿನ ವೇಳೆಯಲ್ಲಿ ಅಂಥವರ ಜೀವನ ಚರಿತ್ರೆಗಳನ್ನು ಓದಿ ಸ್ಫೂರ್ತಿ ಪಡೆಯಿರಿ ಎಂದರು.
ಉಪನ್ಯಾಸಕ ಎಫ್.ಎನ್. ಹುಡೇದ ಮಾತನಾಡಿ, ನಾವು ನಮ್ಮ ಜೀವನದಲ್ಲಿ ಯಾವ ವಯಸ್ಸಿನಲ್ಲಿ ಏನು ಮಾಡಬೇಕೋ ಅದನ್ನೇ ಮಾಡಬೇಕು. ಅಧ್ಯಯನದ ಸಮಯದಲ್ಲಿ ಅಧ್ಯಯನ ಬಿಟ್ಟು ಬೇರೆ ಯಾವುದಕ್ಕೂ ಮನಸ್ಸು ಹರಿಸಬಾರದು. ಶ್ರದ್ಧೆ ಮತ್ತು ಏಕಚಿತ್ತದಿಂದ ಓದಿದಾಗ ವಿದ್ಯೆ ತಲೆಗೆ ಹತ್ತುತ್ತದೆ. ಈ ದಿನದಲ್ಲಿ ನೀವು ವಿದ್ಯೆಯನ್ನು ಅಲಕ್ಷ್ಯ ಮಾಡಿದರೆ ಅದು ನಿಮ್ಮನ್ನು ನಿಮ್ಮ ಜೀವನದುದ್ದಕ್ಕೂ ಬಾಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುತ್ತು ಕಡಗದ, ಉಪನ್ಯಾಸಕ ಶಿವಾನಂದ ಗೋಗೇರಿ, ಉಪನ್ಯಾಸಕ ಹೊನವಾಡ, ಮಲ್ಲಯ್ಯ ಗುಂಡಗೋಪುರಮಠ, ನಂದೀಶ ಅಚ್ಚಿ, ಉಪನ್ಯಾಸಕ ಜಯಕಾಂತ ನರಗುಂದ, ವಿರುಪಾಕ್ಷ ಸಂಗನಾಳ, ಈಶ್ವರ ಬೆಟಗೇರಿ, ಶರಣಯ್ಯ ಬಾಗಲತ್ತಿ, ವಿಜಯ ಕುಂಟೋಜಿ, ವಿನಯಶ್ರೀ ಪರಯ್ಯನಮಠ, ವಿದ್ಯಾ ಪಾಟೀಲ, ಉದಯಕುಮಾರ ಸವದಿ, ಮುತ್ತಣ್ಣ ಗೆದಗೇರಿ, ಸಣ್ಣಪ್ಪ ಹರ್ತಿ, ಶಿವಪ್ಪ ಕರಿಯತ್ತಿನ, ಚೇತನಾ ಕರಿಯತ್ತಿನ, ಸಾಗರ ಕುಂಬಾರ ಮತ್ತಿತರರಿದ್ದರು.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿದ ನಾಗಲಕ್ಷ್ಮೀ ಸಂಗನಾಳ, ಸ್ನೇಹಾ ಜುಟ್ಲ, ಬಸಮ್ಮ ಗಡಾದ, ಹರ್ಷಿತಾ ಪಾಟೀಲ, ಸಿಂಧೂ ಬೂದಿಹಾ¼, ಪ್ರಗತಿ ಹಿರೇಹಾಳರನ್ನು ಗೌರವಿಸಲಾಯಿತು. ಅನುಪಮಾ ಗ್ರಾಮಪುರೋಹಿತ ಸ್ವಾಗತಿಸಿದರು. ಗೌರಿ ಪಾಟೀಲ ನಿರೂಪಿಸಿದರು. ಸಂಜಯ ಯಲಿಗಾರ ವಂದಿಸಿದರು.



