ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಲಾ ಹಂತದಲ್ಲಿ ಏರ್ಪಡಿಸುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ಪಾಲ್ಗೊಳ್ಳಬೇಕು. ಎಲ್ಲರಲ್ಲಿಯೂ ಸ್ಪರ್ಧಾ ಮನೋಭಾವನೆ ಬೆಳೆದು ಬರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ತಿಳಿಸಿದರು.
ಅವರು ಲಕ್ಷ್ಮೇಶ್ವರ ತಾಲೂಕಾ ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ 79ನೇ ಸ್ವಾತಂತ್ರ‍್ಯ ದಿನಾಚರಣೆಯ ಪ್ರಯುಕ್ತ ದೂದ್ ಪೀರಾ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಲಕ್ಷ್ಮೇಶ್ವರ ನಗರ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಸ್ವಾತಂತ್ರ‍್ಯ ಹೋರಾಟದ ಇತಿಹಾಸವನ್ನು ನಮ್ಮ ವಿದ್ಯಾರ್ಥಿಗಳು ಪ್ರತಿಕ್ಷಣ ನೆನಪಿಸಿಕೊಂಡು ಅದರಿಂದ ಸ್ಫೂರ್ತಿ ಪಡೆಯಬೇಕು. ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು. ಆ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ರಸಪ್ರಶ್ನೆ ಸ್ಪರ್ಧೆ ಒಂದು ಉತ್ತಮ ಪ್ರಯತ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ. ಹವಾಲ್ದಾರ ಮಾತನಾಡಿ, ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತವೆ. ಸ್ಪರ್ಧಾತ್ಮಕ ಮನೋಭಾವ ಮೂಡಿಸುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯು ದೃಢಗೊಳ್ಳುತ್ತದೆ ಎಂದು ಹೇಳಿದರು.
ರಸಪ್ರಶ್ನೆ ಸ್ಪರ್ಧೆಯ ಸಂಯೋಜಕ, ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಮಾತನಾಡಿ, ಪ್ರತಿ ವರ್ಷ ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ದೇಶಭಕ್ತಿ ಬಿಂಬಿಸುವ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಪ್ರೌಢಶಾಲೆಗಳಿಗೆ ರಸಪ್ರಶ್ನೆ ಸ್ಪರ್ಧೆ, ಪ್ರಾಥಮಿಕ ವಿಭಾಗಕ್ಕೆ ರಾಷ್ಟ್ರೀಯ ನಾಯಕರು, ದೇಶಭಕ್ತರ ವೇಷಭೂಷಣ ಸ್ಪರ್ಧೆ ಹಾಗೂ ಸ್ವಾತಂತ್ರ್ಯೋತ್ಸವ ಪರೇಡ್, ದೇಶಭಕ್ತಿಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ, ಎಸ್.ಡಿ.ಎಂ.ಸಿ ಸದಸ್ಯರಾದ ರಿಯಾಜ್ ಮಾರಿಹಾಳ, ಸತೀಶ ಬೋಮಲೆ, ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿ.ಆರ್.ಪಿ ಎನ್.ಎ. ಮುಲ್ಲಾ ಸ್ವಾಗತಿಸಿದರು. ಉಮೇಶ ನೇಕಾರ ವಂದಿಸಿದರು. ಲಕ್ಷ್ಮೇಶ್ವರ ನಗರ ವ್ಯಾಪ್ತಿಯ 15 ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾಪೀಠ ಪಾಠಶಾಲೆ (ಪ್ರಥಮ), ಎಸ್‌ಟಿಪಿಎಂ.ಬಿ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ), ಲಿಟಲ್ ಹಾರ್ಟ್ ಇಂಟರ್ನ್ಯಾಷನಲ್ ಶಾಲೆ (ತೃತೀಯ) ಸ್ಥಾನ ಪಡೆದುಕೊಂಡಿತು.



