ವಿಜಯಸಾಕ್ಷಿ ಸುದ್ದಿ, ಗದಗ: ಅಲ್ಪತೆ ಅಳಿಸಿ ವಿಶ್ವತೆ ತರುವುದೇ ಶಿಕ್ಷಣದ ಉದ್ದೇಶವಾಗಬೇಕು. ಪ್ರತಿಯೊಬ್ಬರನ್ನು ವಿಶ್ವಮಾನವರನ್ನಾಗಿ ರೂಪಿಸುವಲ್ಲಿ ವಿದ್ಯೆ, ಸಂಸ್ಕೃತಿ ಮತ್ತು ನಾಗರಿಕತೆಗಳ ಪಾತ್ರ ಮಹತ್ವದ್ದು. ಜಾತಿ-ಮತ- ಪಂಥಗಳನ್ನು ಮೀರಿ ನಾವೇಲ್ಲರೂ ವಿಶ್ವಮಾನವರಾಗೋಣ ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2726ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಬಾಲ್ಯದಿಂದಲೇ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಮಕ್ಕಳಲ್ಲಿ ಬಿತ್ತಬೇಕು. ಮನುಷ್ಯ ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತಾನೆ. ಬೆಳೆಯುತ್ತ ಸಮಾಜ ಅಲ್ಪಮಾನವನನ್ನಾಗಿ ರೂಪಿಸುತ್ತದೆ. ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಎನ್ನುವುದೇ ವಿಶ್ವಮಾನವ ಕಲ್ಪನೆ. ವಿಶ್ವವೇ ನಮ್ಮ ಮನೆ ಎಂಬ ವಿಶಾಲವಾದ ಭಾವನೆ ಬೆಳೆದಾಗ ಮಾತ್ರ ವಿಶ್ವಮಾನವ ದಿನಾಚರಣೆ ಸಾರ್ಥಕ ಎಂದರು.
ಮನುಷ್ಯ ಜಾತಿ ತಾನೊಂದೇ ವಲಂ ಎಂದು ಅಸಮಾನತೆಯನ್ನು ತೊಡೆದು ಹಾಕಬೇಕು. ದ್ವೇಷ, ಅಸೂಯೆ ಬಿಟ್ಟು ವಿಶ್ವಕುಟುಂಬಿಗಳಾಗಬೇಕು. ಪ್ರತಿಯೊಬ್ಬರೂ ಪ್ರೀತಿ, ಸಾಮರಸ್ಯ, ಸಮಾನತೆಯಿಂದ ಬದುಕುವುದೇ ನಿಜವಾದ ಧರ್ಮ. ಕುವೆಂಪು ಅವರು ಆ ಮತ ಈ ಮತವಲ್ಲ, ಮನುಜ ಮತ. ಆ ಪಥ ಈ ಪಥವಲ್ಲ, ವಿಶ್ವಪಥ ಎಂದು ಸಾರಿದ್ದಾರೆ ಎಂದು ಶ್ರೀಗಳು ನುಡಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಎ.ಎಸ್.ಎಸ್. ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಬಾಹುಬಲಿ ಜೈನರ ಮಾತನಾಡುತ್ತಾ, ಕುವೆಂಪು ಶ್ರೇಷ್ಠ ಕವಿ. ಅಧ್ಯಾತ್ಮಿಕ, ನಿಸರ್ಗ, ವೈಚಾರಿಕ ಕವಿ. ಹತ್ತು ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ವಿಶಿಷ್ಟವಾದ ವಿಶ್ವಮಾನವ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಪೂಜಿ ಪಾಲ್ಗೊಂಡು ಮಾತನಾಡಿದರು. ಪ್ರದೀಪ ಅರ್ಕಸಾಲಿ ಹಗರಿಬೊಮ್ಮನಹಳ್ಳಿ ಇವರು ವಾಯೋಲಿನ್ ನುಡಿಸಿದರು. ಪ್ರಸಾದ ಸುತಾರ ಸಂಗೀತ ಸೇವೆ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಧನುಷ್ಯ ಎಂ.ಮಳಗಲಿ ಹಾಗೂ ವಚನ ಚಿಂತನವನ್ನು ಕೃತಿಕಾ ಎಸ್.ಅರಸಿದ್ದಿ ನಡೆಸಿಕೊಟ್ಟರು.
ದಾಸೋಹ ಸೇವೆಯನ್ನು ರತ್ನಕ್ಕ ಬಸನಗೌಡ ಪಾಟೀಲ್, ಅವಿನಾಶ ಮತ್ತು ಅಭಿಲಾಶ ಇವರ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾ ಪ್ರಭು ಗಂಜಿಹಾಳ ವಹಿಸಿಕೊಂಡಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಉಪಾಧ್ಯಕ್ಷ ಉಮೇಶ್ ಪುರದ, ವಿದ್ಯಾ ಪ್ರಭು ಗಂಜಿಹಾಳ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ಶಿವಾನಂದ ಹೊಂಬಳ ಕಾರ್ಯಕ್ರಮ ನಿರೂಪಿಸಿದರು.
ಡಾ. ಎಸ್.ಎಸ್. ಉಪ್ಪಿನ ಧಾರವಾಡ ಇವರ ಸ್ಮರಣಾರ್ಥ ಸೋಮಶೇಖರ ಮುನವಳ್ಳಿ ಯು.ಎಸ್.ಎ. ಕೊಡಮಾಡುವ ಮಾಧ್ಯಮ ಪ್ರಶಸ್ತಿಯನ್ನು ಪತ್ರಕರ್ತೆ ಕೀರ್ತನಾ ಕುಮಾರಿ ಕೆ. ಬೆಳಗಾವಿ ಇವರಿಗೆ ಮತ್ತು ಮಾತೋಶ್ರೀ ವೀರಮ್ಮ ನಾಗಪ್ಪ ಮುನವಳ್ಳಿ ಇವರ ಸ್ಮರಣಾರ್ಥ ಸಮಾಜ ಸೇವಿಕಾ ಪ್ರಶಸ್ತಿಯನ್ನು ಶಿಕ್ಷಕಿ ಶಹನಾಜ ಬೇಗಂ ಸಲೀಂ ಅಣ್ಣಿಗೇರಿ ಇವರಿಗೆ ಪ್ರದಾನ ಮಾಡಲಾಯಿತು.



