ಲವ್ ಮಾಕ್ಟೇಲ್ 3 ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಣದ ಹಿಂದೆ ಇರುವ ಆಸಕ್ತಿದಾಯಕ ವಿಚಾರಗಳನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, “ಒಂದು ಕ್ಷಣದಲ್ಲಿ ಈ ಸಿನಿಮಾದ ಕಥೆಯ ಐಡಿಯಾ ಹೊಳೆಯಿತು. ನಂತರ ಮನೆಯಲ್ಲಿ ಕಥೆ ಬರೆಯಲು ಆಗಲಿಲ್ಲ. ಮೂರು ದಿನಗಳ ಕಾಲ ಗೋವಾಗೆ ಹೋಗಿ ಅಲ್ಲಿಯೇ ಕಥೆ ಹಾಗೂ ಚಿತ್ರಕಥೆಗೆ ರೂಪುರೇಷೆ ಕೊಟ್ಟು ಮತ್ತೆ ಮರಳಿದ್ದೆ” ಎಂದು ಕಥೆ ಹುಟ್ಟಿದ ಬಗೆಯನ್ನು ವಿವರಿಸಿದರು.
ಇದೇ ವೇಳೆ ಮಾತನಾಡಿದ ಮಿಲನಾ ನಾಗರಾಜ್, “ಈ ಸಿನಿಮಾ ದೊಡ್ಡ ಸಿನಿಮಾಗಳ ಎದುರಲ್ಲೂ ಆತ್ಮವಿಶ್ವಾಸದಿಂದ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂಬ ನಂಬಿಕೆ ನಮಗಿದೆ. ಮೊದಲ ಎರಡು ಭಾಗಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಈ ಚಿತ್ರಕ್ಕೂ ನೀಡುತ್ತಾರೆ ಎಂಬ ವಿಶ್ವಾಸವಿದೆ” ಎಂದರು.
ಚಿತ್ರದಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ರೆಚೆಲ್ ಡೇವಿಡ್, ಶ್ವೇತಾ ಪ್ರಸಾದ್ ಸೇರಿದಂತೆ ಹಲವರು ತಮ್ಮ ಪಾತ್ರಗಳ ಬಗ್ಗೆ ವಿವರಿಸಿ, ಈ ಅವಕಾಶ ನೀಡಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಗೆ ಕೃತಜ್ಞತೆ ಸಲ್ಲಿಸಿದರು.
ಕ್ರಿಸ್‌ಮಿ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರೆಚೆಲ್ ಡೇವಿಡ್, ನಯಾರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಸೇರಿದಂತೆ ಹಲವರು ನಟಿಸಿದ್ದಾರೆ.
ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಹಾಗೂ ಜೋನಾ ಕಲಾ ನಿರ್ದೇಶನ ನೀಡಿದ್ದಾರೆ.



