ಮಂಡ್ಯ: ಮದ್ದೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ರಮೇಶ್ (35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ನಗರದ ಪೊಲೀಸ್ ಠಾಣೆಯ ಹಿಂದಿರುವ ವಿಶ್ರಾಂತಿ ಗೃಹದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಬೆಳಕಿಗೆ ಬಂದಿದೆ. ಮತ್ತೊಬ್ಬ ಪೊಲೀಸ್ ಪೇದೆ ವಿಶ್ರಾಂತಿ ಗೃಹಕ್ಕೆ ತೆರಳಿದಾಗ ಘಟನೆ ಪತ್ತೆಯಾಗಿದೆ.
ಈ ಸಂಬಂಧ ಮೃತರ ಪತ್ನಿ ಪುಷ್ಪಲತಾ ಅವರು ಮದ್ದೂರು ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೇದೆ ಮಹೇಶ್ ಎಂಬುವರು ನನ್ನ ಪತಿ ರಮೇಶ್ ಅವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಹಲವಾರು ಬಾರಿ ಗಲಾಟೆ ನಡೆದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಮೃತ ರಮೇಶ್ ಹಾಗೂ ದೂರು ದಾಖಲಾದ ಮಹೇಶ್ ಇಬ್ಬರೂ ಮದ್ದೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸ್ ವಸತಿಗೃಹದಲ್ಲೇ ವಾಸವಾಗಿದ್ದರು ಎನ್ನಲಾಗಿದೆ. ಘಟನೆ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಚಿಕ್ಕಬಳ್ಳಾಪುರಕ್ಕೆ ರವಾನಿಸಲಾಗಿದೆ.



