ಚಿಕ್ಕಬಳ್ಳಾಪುರ: ದೆವ್ವ ಕಾಟವಿದೆ ಎಂಬ ಭಯದಿಂದ ಮಾನಸಿಕವಾಗಿ ಅಸ್ವಸ್ಥಳಾಗಿ ವರ್ತಿಸುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ (36) ಮೃತ ಮಹಿಳೆ.
ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಮಂಜುಳಾರನ್ನು ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. 16 ವರ್ಷಗಳ ಹಿಂದೆ ತೌಡನಹಳ್ಳಿ ಗ್ರಾಮದ ರಮೇಶ್ ಅವರನ್ನು ವಿವಾಹವಾಗಿದ್ದು, ದಂಪತಿಗಳ ನಡುವೆ ಯಾವುದೇ ಗೃಹ ಕಲಹ ಇರಲಿಲ್ಲವೆಂದು ತಿಳಿದುಬಂದಿದೆ. ಇತ್ತೀಚೆಗೆ ತವರು ಮನೆಗೆ ತೆರಳಿ, ಮಾವನ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದ ನಂತರ ಅವರು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದರು ಎನ್ನಲಾಗಿದೆ.
ತಮ್ಮ ಮುಂದೆ ಯಾರೋ ಕಾಣಿಸಿಕೊಂಡು ಕಾಡುತ್ತಿರುವ ಅನುಭವವಾಗುತ್ತಿದೆ ಎಂದು ಮಂಜುಳಾ ಹೇಳುತ್ತಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದರಿಂದ ಭಯಗೊಂಡ ಪತಿ ರಮೇಶ್ ಕೆಲಸ ಕಾರ್ಯಗಳನ್ನು ಬಿಟ್ಟು ದೇವಾಲಯಗಳು ಮತ್ತು ಮಂತ್ರ ಚಿಕಿತ್ಸಕರನ್ನು ಸಂಪರ್ಕಿಸಿ ಪರಿಹಾರ ಹುಡುಕಲು ಪ್ರಯತ್ನಿಸಿದ್ದರು. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಪೂಜೆ ಮಾಡಿಸಿ ತಾಯತ ಕಟ್ಟಿಸಿದ್ದರೂ ಯಾವುದೇ ಬದಲಾವಣೆ ಕಾಣಿಸಲಿಲ್ಲ.
ನಂತರ ವೈದ್ಯರ ಬಳಿ ತೋರಿಸಿದರೂ ಆರೋಗ್ಯದಲ್ಲಿ ಸುಧಾರಣೆ ಆಗದೇ, ಮಂಜುಳಾ ವಿಚಿತ್ರವಾಗಿ ವರ್ತಿಸುತ್ತಲೇ ಕೊನೆಗೆ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



