HomeGadag Newsನವ ದಂಪತಿಗಳು ನಡೆ-ನುಡಿಗಳ ಪರಿಶುದ್ಧತೆಯೊಂದಿಗೆ ಬಾಳಿ: ತೊಂಟದಾರ್ಯ ಶ್ರೀ

ನವ ದಂಪತಿಗಳು ನಡೆ-ನುಡಿಗಳ ಪರಿಶುದ್ಧತೆಯೊಂದಿಗೆ ಬಾಳಿ: ತೊಂಟದಾರ್ಯ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಯಾವ ವ್ಯಕ್ತಿ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಳ್ಳುತ್ತಾನೋ ಅಂತಹ ಮಹಾನ್ ವ್ಯಕ್ತಿಗಳನ್ನು ಸಮಾಜವು ಸದಾ ಸ್ಮರಿಸುತ್ತದೆ. ಅಂತಹ ಮಹನೀಯರ ಸಾಲಿನಲ್ಲಿ ಪಂ. ಪುಟ್ಟರಾಜ ಕವಿಗವಾಯಿಗಳು ಪ್ರಮುಖರಾಗಿದ್ದಾರೆ ಎಂದು ತೋಂಟದಾರ್ಯ ಶ್ರೀಮಠದ ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಅವರು ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 112ನೇ ಜಯಂತಿ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ 12 ವರ್ಷಗಳಿಂದ ಪೀರಸಾಬ ಕೌತಾಳ ದಂಪತಿಗಳು ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಂ. ಪುಟ್ಟರಾಜ ಗವಾಯಿಗಳವರ ಜಯಂತಿ ಹಾಗೂ ಸರ್ವಧರ್ಮೀಯರ ಸಾಮೂಹಿಕ ವಿವಾಹವನ್ನು ಅರ್ಥವಂತಿಕೆಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ನೂತನ ದಂಪತಿಗಳು ಬಸವಾದಿ ಶರಣರಂತೆ ನಡೆ-ನುಡಿಗಳನ್ನು ಪರಿಶುದ್ಧವಾಗಿಟ್ಟುಕೊಂಡು ಪ್ರೀತಿ, ವಿಶ್ವಾಸದಿಂದ ಬದುಕನ್ನು ಸಾಗಿಸಬೇಕು ಎಂದು ಹೇಳಿದರು.

ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳು ಮಾತನಾಡಿ, ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಭಯಭಕ್ತಿ ಇದ್ದುದರಿಂದ ಅವರು ಗೌರವಯುತವಾಗಿ ಜೀವನ ನಡೆಸುತ್ತಿದ್ದರು. ಇಂದು ಹಿರಿಯರು ಇಲ್ಲದೆ, ಗಂಡ-ಹೆಂಡತಿ ಮಾತ್ರ ಇರಲು ಬಯಸಿ ಪರಸ್ಪರ ಅರಿತುಕೊಳ್ಳದೆ ಇರುವುದರಿಂದ ವಿಚ್ಛೇದನಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಅಡ್ನೂರ-ರಾಜೂರ-ಗದಗ ದಾಸೋಹಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪಂ. ಪುಟ್ಟರಾಜ ಗವಾಯಿಗಳು ಅಂಧ-ಅನಾಥರಿಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿ ಅವರ ಭಿಕ್ಷೆ ಪಾತ್ರೆ ಬಿಡಿಸಿ ಅವರಿಗೆ ಅಕ್ಷಯ ಪಾತ್ರೆ ನೀಡಿ ಮಹಾನ್ ಯೋಗಿಯಾಗಿದ್ದಾರೆ ಎಂದು ಹೇಳಿದರು.

ವೇದಿಕೆ ಮೇಲೆ ತುಮಕೂರಿನ ನೋಣವಿನಕೇರಿ ಕಾಡಸಿದ್ದೇಶ್ವರ ಶ್ರೀಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಮಲ್ಲಸಮುದ್ರದ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಪಕ್ಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ವೀರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು, ಶರಣೆ ನೀಲಮ್ಮ ತಾಯಿಯವರು, ಲಿಂಗಸೂರ ಮಾಣಿಕೇಶ್ವರಿ ಮಠದ ಉಜ್ಜಯನಿ ನಂದೀಶ್ವರಿ ಅಮ್ಮನವರು, ಮೌಲಾನಾ ಇನಾಯತವುಲ್ಲಾ ಫೀರಜಾದೆ, ಯುವ ಮುಖಂಡ ಸಚಿನ್ ಪಾಟೀಲ, ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಪೀರಸಾಬ ಕೌತಾಳ ಮುಂತಾದವರು ಉಪಸ್ಥಿತರಿದ್ದರು.

ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಯಾ ಪೀರಸಾಬ ಕೌತಾಳ ಪ್ರಾರ್ಥಿಸಿದರು. ಜೋಹರಾ ಪೀರಸಾಬ ಕೌತಾಳ ಗವಾಯಿಗಳವರ ಗದ್ದುಗೆಗೆ ಪುಷ್ಪಸೇವೆ ಸಲ್ಲಿಸಿದರು. ಪತ್ರಕರ್ತರಾದ ಆನಂದಯ್ಯ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ವೀರೇಶ್ವರ ಪುಣ್ಯಾಶ್ರಮದಿಂದ 1012 ಕುಂಭೋತ್ಸವ ಮೆರವಣಿಗೆಗೆ ಜೋಹರಾ ಕೌತಾಳ ಅವರು ಚಾಲನೆ ನೀಡಿದರು.

ಯುವ ಮುಖಂಡ ಕೃಷ್ಣಗೌಡ ಪಾಟೀಲ ಮಾತನಾಡಿ, ಪಂ. ಪುಟ್ಟರಾಜ ಕವಿ ಗವಾಯಿಗಳು ಅಂಧರಿಗೆ ಕಣ್ಣಾಗಿ ಬದುಕಿ, ನಮ್ಮೆಲ್ಲರಿಗೂ ಪ್ರೇರಣಾ ದೀಪವಾಗಿದ್ದಾರೆ. ಇಂತಹ ಪವಿತ್ರವಾದ ದಿನದಲ್ಲಿ ಕೆ.ಎಚ್. ಪಾಟೀಲ ಅಭಿಮಾನಿ ಬಳಗದಿಂದ ಸತತ 12 ವರ್ಷಗಳಿಂದ ಪುಟ್ಟರಾಜ ಗವಾಯಿಗಳವರ ಜಯಂತಿ ಆಚರಣೆ ಮತ್ತು ಸಾಮೂಹಿಕ ವಿವಾಹ ಮಾಡುತ್ತ ಬಂದಿರುವ ಪೀರಸಾಬ ಕೌತಾಳ ದಂಪತಿಗಳಿಗೆ ಈಗ ಇದು ಕಾರ್ಯವಾಗಿ ಉಳಿದಿಲ್ಲ, ಸಂಸ್ಕಾರವಾಗಿ ಬೆಳೆದು ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಂ. ಪುಟ್ಟರಾಜ ಗವಾಯಿಗಳವರು ರಚಿಸಿದ ವೀರಭದ್ರೇಶ್ವರ ಪುರಾಣ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಕಲ್ಲಯ್ಯಜ್ಜನವರಿಗೆ 3067ನೇ ತುಲಾಭಾರ ಸೇವೆ ಸಲ್ಲಿಸಲಾಯಿತು. 112 ಕೆ.ಜಿ ತೂಕದ ಕೇಕ್‌ನ್ನು ಕತ್ತರಿಸಲಾಯಿತು. 19 ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ದಿ. ಕೆ.ಎಚ್. ಪಾಟೀಲ ಪ್ರಶಸ್ತಿಯನ್ನು ಕೊಪ್ಪಳದ ಸಂಗೀತ ಕಲಾವಿದರಾದ ಸದಾಶಿವ ಪಾಟೀಲ ಅವರಿಗೆ ನೀಡಲಾಯಿತು. ಧಾರವಾಡದ ನ್ಯಾಯವಾದಿ ಗುರು ಹಿರೇಮಠ, ಗದಗ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಪತ್ರಕರ್ತರಾದ ರಘೋತ್ತಮ ಕೊಪ್ಪರ, ವಿಕಸಿತ ಯುವ ಸಂಸತ್ ಮಹೋತ್ಸವದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಬಿ. ಮಾನ್ಯ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!