ವಿಜಯಸಾಕ್ಷಿ ಸುದ್ದಿ, ಗದಗ: ಧ್ಯಾನವು ಬಹು ಪ್ರಾಚೀನ ಕಾಲದಿಂದಲೂ ರೂಢಿಗತವಾಗಿ ಬೆಳೆದು ಬಂದಿರುವ ಒಂದು ಸಾಧನೆ ಕ್ರಮವಾಗಿದೆ. ಪ್ರಸ್ತುತದಲ್ಲೂ ನಾವು ಸುಖ-ಸಂತೋಷದಿಂದಇರಬೇಕೆಂಬ ಅಭಿಲಾಷೆಯಿಂದ ನೂರೆಂಟು ವಿಚಾರಗಳನ್ನು ಸೃಷ್ಟಿಸಿಕೊಂಡು ಅವುಗಳ ಪೂರೈಕೆಗಾಗಿ ಹಲವು ವಿಧವಾಗಿ ಪ್ರಯತ್ನಿಸುತ್ತೇವೆ. ಅಂಥ ಪ್ರಯತ್ನಗಳಲ್ಲಿ ಧ್ಯಾನವು ಅಗ್ರಮಾನ್ಯವಾಗಿದೆ. ಧ್ಯಾನದಿಂದ ಮಾನವನ ಮನಸ್ಸು ಸದೃಢಗೊಂಡು ಅವನಲ್ಲಿ ಆಂತರಿಕ ಜ್ಞಾನ ಹೆಚ್ಚುವುದು. ಆಂತರಿಕ ಜ್ಞಾನದಿಂದ ಮಾನವ ತನ್ನೆಲ್ಲ ವಿಚಾರಗಳಿಗೆ ಪ್ರಾಶಸ್ತ್ಯ ನೀಡಿ ಅವುಗಳ ಯಶಸ್ಸಿನಿಂದಲೇ ಜೀವನದಲ್ಲಿ ತೃಪ್ತಿ, ನೆಮ್ಮದಿ, ಸುಖ-ಶಾಂತಿಗಳನ್ನು ಪಡೆಯಬಹುದು ಎಂದು ಹಿರಿಯ ಯೋಗ ಸಾಧಕರಾದ ಎಸ್.ಕೆ. ಮೇಲ್ಮುರಿ ತಿಳಿಸಿದರು.
ಇಲ್ಲಿನ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಸಿದ್ಧಲಿಂಗ ಗದಗ ಮತ್ತು ಬಸವ ಯೋಗ ಚಿಂತನಕೂಟ ಗದಗ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಆಯೋಜಿಸಿದ್ದ ಮೊದಲನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧ್ಯಾನವು ಅಪರಿಮಿತ ಪ್ರಯೋಜನಗಳನ್ನು ಹೊಂದಿದೆ. ಧ್ಯಾನವನ್ನು ಕೇವಲ ಕಾರ್ಯಕ್ರಮಕ್ಕೆ ಮೀಸಲಾಗಿರಿಸದೆ ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಎಚ್. ಚಿಕ್ಕನಗೌಡರ ಮಾತನಾಡಿ, ಒಂದು ವಿಷಯ/ಗುರಿ ಸಾಧನೆಗಾಗಿ ಮನಸ್ಸನ್ನು ಸಜ್ಜುಗೊಳಿಸುವುದೇ ಧ್ಯಾನ. ಧ್ಯಾನದಲ್ಲಿ ಹಲವು ವಿಧಗಳಿವೆ. ವಿಪಶ್ಯನ ಧ್ಯಾನ, ಪ್ರತಿಕ್ಷಾ ಧ್ಯಾನ, ಇಷ್ಟಲಿಂಗ ಧ್ಯಾನ, ಪಾರಮಾರ್ಥಿಕ ಧ್ಯಾನ, ರಾಜಯೋಗ ಧ್ಯಾನ, ಸಗುಣ, ನಿರ್ಗುಣ ಧ್ಯಾನಗಳು ಶ್ರೇಷ್ಠವಾದವುಗಳಾಗಿವೆ. ಧ್ಯಾನ ಸಾಧನೆಗೆ ಪತಂಜಲಿಯ ಅಷ್ಟಾಂಗ ಯೋಗವು ಅತ್ಯುತ್ತಮವಾಗಿದೆ. ಹಂತ-ಹಂತವಾಗಿ ಧ್ಯಾನ ಸಾಧನೆಯಲ್ಲಿ ಮುನ್ನಡೆಯಬೇಕೆಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷೆ ವಿಜಯಾ ಚನ್ನಶೆಟ್ಟಿ, ಮಹಿಳೆಯರ ಮನಸ್ಸು ಹೆಚ್ಚಿನಾಂಶ ಚಂಚಲವಾಗಿರುತ್ತದೆ. ಚಂಚಲ ಮನಸ್ಸು ಸ್ಥಿರಗೊಳ್ಳಲು ಧ್ಯಾನ ಸಹಕಾರಿಯಾಗಿದೆ ಎಂದು ತಮ್ಮ ಅನಿಸಿಕೆ ಹೇಳಿದರು.
ಧ್ಯಾನದ ಕುರಿತು ಸಭಿಕರ ಪರವಾಗಿ ನಿವೃತ್ತ ಪ್ರಾಧ್ಯಾಪಕ ರಮೇಶ ಮೇಹರವಾಡೆ ಮಾತನಾಡಿ, ಧ್ಯಾನ ಎಂದರೆ ಕಣ್ಣು ಮುಚ್ಚಿ ಸುಮ್ಮನೆ ಕೂಡ್ರುವದಲ್ಲ, ಚಿಂತೆಗಳಿಲ್ಲದ ಚಿಂತನಯುಕ್ತ ಮನಸ್ಥಿತಿಯೇ ಧ್ಯಾನ. ತಾತ್ಕಾಲಿಕ ಸುಖ-ಭೋಗಗಳಿಗೆ ಚಿಂತೆ ಮಾಡದೆ ಶಾಶ್ವತ ಸುಖ-ಶಾಂತಿಗಾಗಿ ಚಿಂತನೆ ಮಾಡುವುದೇ ಧ್ಯಾನ ಎಂದು ತಿಳಿಸಿದರು.
ಡಿ.ಜಿ.ಎಂ ಆಯುರ್ವೇದಿಕ್ ಕಾಲೇಜು ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಮಾತನಾಡಿ, ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಧ್ಯಾನಾಸಕ್ತಿ ಬೆಳೆಸಿದರೆ ಮುಂದೆ ಅವರು ಮಹಾನ್ ಶಕ್ತಿಶಾಲಿಗಳಾಗಿ ಬೆಳೆಯುವರು ಎಂದರು.
ಯೋಗ ಮತ್ತು ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ ಧ್ಯಾನಗೀತೆ ಹಾಡಿದರು. ಪ್ರಾರಂಭದಲ್ಲಿ ಸಾಮೂಹಿಕವಾಗಿ ಓಂಕಾರ ಪ್ರಾರ್ಥನೆ, ಯೋಗ ಪ್ರಾರ್ಥನೆಗಳನ್ನು ಹೇಳಲಾಯಿತು. ನಗರಸಭಾ ಆರೋಗ್ಯ ಇಲಾಖೆಯ ಅಭಿಯಂತರರಾದ ಆನಂದ ಬದಿ ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಎಸ್. ಪಲದ ಪ್ರಾಸ್ತಾವಿಕ ನುಡಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು.ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ವಂದಿಸಿದರು.



