ಹಾಸನ: ಗಾಂಜಾ ಅಮಲಿನಲ್ಲಿ ಸ್ನೇಹಿತನನ್ನೇ ಅಪಹರಿಸಿ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ, ಬಳಿಕ ಶವವನ್ನು ಸುಟ್ಟು ಸಾಕ್ಷಿ ನಾಶ ಮಾಡಲು ಯತ್ನಿಸಿರುವ ಬೆಚ್ಚಿಬೀಳಿಸುವ ಘಟನೆ ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್ಲಿ ಬೆಳಕಿಗೆ ಬಂದಿದೆ.
ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿ ವರುಣ್ (22) ಹತ್ಯೆಯಾದ ಯುವಕನಾಗಿದ್ದು, ಹಣಕಾಸು ವಿಚಾರವೇ ಈ ದಾರುಣ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಸಂಬಂಧ ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್ ಹಾಗೂ ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಮಾರ್ಚ್ 10ರಿಂದ ವರುಣ್ ನಾಪತ್ತೆಯಾಗಿದ್ದ. ಹಣಕಾಸು ವಿಚಾರದಲ್ಲಿ ವಾಗ್ವಾದದ ಹಿನ್ನೆಲೆಯಲ್ಲಿ ವರುಣ್ ಹಾಗೂ ಅವನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಅಪಹರಿಸಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ಬಂಧಿಸಿದ್ದರು. ಅಲ್ಲಿ ಇಬ್ಬರ ಮೇಲೂ ಹಲ್ಲೆ ನಡೆಸಲಾಗಿದ್ದು, ಲೋಹಿತ್ ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ.
ಆದರೆ ವರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಆರೋಪಿಗಳು, ಬಳಿಕ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶವವನ್ನು ಸುಟ್ಟು ಪರಾರಿಯಾಗಿದ್ದಾರೆ.
ಇನ್ನೊಂದೆಡೆ, ಮಾರ್ಚ್ 15ರಂದು ಪುತ್ರ ನಾಪತ್ತೆಯಾದ ಬಗ್ಗೆ ವರುಣ್ ತಾಯಿ ಕಲಾವತಿ ಗಂಡಸಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ತನಿಖೆಯ ವೇಳೆ ಕೊಲೆ ಪ್ರಕರಣದ ಭೀಕರ ಸತ್ಯ ಬಹಿರಂಗವಾಗಿದೆ.
ಸಿನಿಮೀಯ ಶೈಲಿಯಲ್ಲಿ ಅಪಹರಣೆ, ಹಲ್ಲೆ ಹಾಗೂ ಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಮಾರ್ಚ್ 19ರಂದು ದುದ್ದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.



