ಮೈಸೂರು: ರಾಜ್ಯ ಸರ್ಕಾರ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿದೆ. ತಮ್ಮ 17ನೇ ದಾಖಲೆಯ ಬಜೆಟ್ ವೇಳೆ ಸಿಎಂ ಸಿದ್ದರಾಮಯ್ಯ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಈ ನಿರ್ಧಾರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಈ ನಿರ್ಧಾರವನ್ನು ಖಂಡಿಸಿದ್ದಾರೆ. ಮಕ್ಕಳಿಗೆ ಮೊಬೈಲ್ ಬ್ಯಾನ್ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮನೆಯಲ್ಲಿ ಮಕ್ಕಳು ಅವರ ಅಪ್ಪ, ಅಮ್ಮನ ಮೊಬೈಲ್ ಎತ್ತಿಕೊಂಡು ನೋಡುತ್ತಾರೆ. ಅವರನ್ನು ಏನು ಮಾಡಲು ಆಗುತ್ತೆ, ಜೈಲಿಗೆ ಹಾಕುವುದಕ್ಕೆ ಆಗುತ್ತಾ? ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಏಕೆ ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಬಜೆಟ್ನಲ್ಲಿ ಕನ್ನಡ ಶಾಲೆಗಳ ಕಡೆಗಣನೆ ಹಿನ್ನೆಲೆ ಇದನ್ನ ಖಂಡಿಸಿ ಮಾ.12 ರಂದು ಕನ್ನಡ ಶಾಲೆಗಳ ಬಂದ್ಗೆ ಕರೆ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಕನ್ನಡ ಶಾಲೆಗಳನ್ನು ಬಂದ್ ಮಾಡುತ್ತೇವೆ. ಮೈಸೂರಿನ ಜಯ ಚಾಮರಾಜೇಂದ್ರ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತೇವೆ. ಇಂಗ್ಲಿಷ್ ಶಾಲೆಗಳಿಗೆ 3900 ಕೋಟಿ ರೂ ಕೊಟ್ಟಿದ್ದೀರಿ. ಕನ್ನಡ ಶಾಲೆಗಳ ಅಭಿವೃದ್ಧಿಗೆ ನಯಾ ಪೈಸೆ ಘೋಷಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಕನ್ನಡವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇಲ್ಲ. ಕನ್ನಡ ಮಾಧ್ಯಮ ಇರುವುದು ಸರ್ಕಾರಿ ಶಾಲೆಗಳಲ್ಲಿ. ಸರ್ಕಾರಿ ಶಾಲೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಕೊಡಬೇಕಿತ್ತು. ಸರ್ಕಾರದ ಧೋರಣೆಯನ್ನು ನಾನು ಖಂಡಿಸುತ್ತೇನೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಮಾ.12 ರಂದು ಎಲ್ಲಾ ಕನ್ನಡ ಶಾಲೆಗಳ ಬಂದ್ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದ್ದಾರೆ.



