ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವವನ್ನು ಬೆಳೆಸುವುದು ಹಾಗೂ ಕಲಿಕೆಯಲ್ಲಿ ಸಂತೋಷವನ್ನುಂಟುಮಾಡುವುದು ಶಿಕ್ಷಕರ ಕರ್ತವ್ಯವಾಗಿದ್ದು, ಶಿಕ್ಷಕರು ಬದಲಾವಣೆಯ ಹರಿಕಾರರು ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನೇತಾರರಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ ನುಡಿದರು.
ಅವರು ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಗದಗ ಶಹರ ವಲಯದ ಸರ್ಕಾರಿ-ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಒಂದು ದಿನದ ಪ್ರೇರಣಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳನ್ನು ನಿರ್ದಿಷ್ಟ ಜ್ಞಾನ ಕೌಶಲ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವುದು, ಅವರಲ್ಲಿ ಸಾಮಾಜಿಕ ಕಾಳಜಿಯನ್ನು ಮೂಡಿಸುವುದು ಹಾಗೂ ಅವರು ನಿರ್ವಹಿಸುವ ಕಾರ್ಯದಲ್ಲಿ ಶ್ರೇಷ್ಠತೆಯನ್ನು ಸೇರಿಸುವುದು ಶಿಕ್ಷಣದ ನೀತಿಯಾಗಿದೆ. ಪ್ರತಿ ಶಿಕ್ಷಣ ಸಂಸ್ಥೆ ಅಥವಾ ಶಿಕ್ಷಕರು ಮುಂದಾಲೋಚನೆಯ ಕಾರ್ಯಸಾಧುವಾದ ಯೋಜನೆಯನ್ನು ಹೊಂದಿರಬೇಕಾಗುತ್ತದೆ. ಮಾಸಿಕ ಕಾರ್ಯಕ್ರಮ ಮುಂತಾದವುಗಳ ಕುರಿತು ಸಮಗ್ರ ಯೋಜನೆ ರೂಪಿಸಿಕೊಂಡು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಾರ್ಯಪ್ರವೃತ್ತರಾಗಬೇಕು.
ಈ ಉದ್ದೇಶಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ 2024-25ನೇ ಶೈಕ್ಷಣಿಕ ವರ್ಷವನ್ನು ಮಕ್ಕಳ ಶೈಕ್ಷಣಿಕ ಬಲವರ್ಧನೆ ವರ್ಷವೆಂದು ಘೋಷಿಸಿದೆ. ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ತಂಡವಾಗಿ ಕಾರ್ಯನಿರ್ವಹಿಸುವಂತೆ ಇನ್ನಷ್ಟು ಪ್ರೇರೇಪಿಸುವ ದೃಷ್ಟಿಯಿಂದ ಈ ಪ್ರೇರಣಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಸ್.ಡಿ. ಕನವಳ್ಳಿ ಮಾತನಾಡಿ, ಪ್ರತಿ ಶಿಕ್ಷಕರು ಆಂತರಿಕ ಪ್ರೇರಣೆ ಹೊಂದಬೇಕು. ಎಲ್ಲರ ಉದ್ದೇಶ ತರಗತಿ ಕೋಣೆಯಲ್ಲಿ ಶಿಕ್ಷಣ ಕೊಡುವುದಾಗಿದೆ.
ಆದರೆ ಯಾವ ಶಿಕ್ಷಕ ತರಗತಿ ಕೊಠಡಿಯೊಳಗೆ ಹೋದಾಗ ಮಕ್ಕಳ ಮುಖ ಅರಳುತ್ತದೆಯೋ, ಯಾವ ಶಿಕ್ಷಕರು ತರಗತಿಯಿಂದ ಹೊರಗೆ ಹೋದಾಗ ಮಕ್ಕಳಿಗೆ ಬೇಸರವಾಗುತ್ತದೆಯೋ ಅವರೇ ನಿಜವಾದ ಉತ್ತಮ ಶಿಕ್ಷಕರು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಶಾಲಾ-ಕಾಲೇಜುಗಳು ಇಂದಿನ ದಿನಮಾನದ ದೇವಾಲಯಗಳು. ಸರ್ಕಾರಿ ಶಾಲಾ ಶಿಕ್ಷಕರಿಗೆ ನೀಡುವ ತರಬೇತಿಗಳನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ನೀಡಬೇಕಿದೆ. ಅಲ್ಲದೆ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಹಾಗೆ ಅನುದಾನಿತ ಶಾಲೆಗಳಿಗೂ ಕೂಡ ಅತಿಥಿ ಶಿಕ್ಷಕರನ್ನು ಕೊಡುವ ಹಾಗೆ ಆಗಬೇಕೆಂದು ತಿಳಿಸಿದರು.
ವೇದಿಕೆ ಮೇಲೆ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವ್ಹಿ.ವ್ಹಿ ನಡುವಿನಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಕೆ. ಮಂಗಳಗುಡ್ಡ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶರಣಪ್ಪ ನಾಗರಳ್ಳಿ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಿ.ಎಚ್. ಕಡಿವಾಲ, ಸದಸ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿ.ಆರ್.ಪಿ, ಬಿ.ಆರ್.ಪಿ ಹಾಗೂ ಇ.ಸಿ.ಓ, ಬಿ.ಐ.ಇ.ಆರ್.ಟಿ ಹಾಜರಿದ್ದರು.
ಬಿ.ಆರ್.ಪಿ ಶಾಮ ಲಾಂಡೆ ಸ್ವಾಗತಿಸಿದರೆ, ಬಿ.ಆರ್.ಪಿ ಪ್ರಕಾಶ ಮಂಗಳೂರ ನಿರೂಪಿಸಿದರು. ಸಿ.ಆರ್.ಪಿ ರವಿ ಹೆಬ್ಬಳ್ಳಿ ವಂದಿಸಿದರು. ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಶೈಕ್ಷಣಿಕ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಪ್ರತಿ ಶಿಕ್ಷಕರು ತಮ್ಮ ತರಗತಿ ವಿಷಯದ ಪಠ್ಯಪುಸ್ತಕವನ್ನು ಕನಿಷ್ಠ ಎರಡು ಬಾರಿಯಾದರೂ ಅಧ್ಯಯನ ಮಾಡಬೇಕು. ಶಿಕ್ಷಕರು ಪ್ರತಿ ತರಗತಿಯಲ್ಲಿ ಅರ್ಥಪೂರ್ಣ ಕಲಿಕೆ ಆಗುವ ನಿಟ್ಟಿನಲ್ಲಿ ಪಾಠಯೋಜನೆಯನ್ನು ತಯಾರಿಸಿಕೊಂಡು ಅದಕ್ಕೆ ಅನುಗುಣವಾಗಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪಾಠಬೋಧನೆ ಮಾಡಬೇಕು. ಶಿಕ್ಷಕರು ಮಹಾಭಾರತದಂಥ ಮಹಾಕಾವ್ಯದ ಕಥೆಗಳಿಂದ ಪ್ರೇರಣೆ ಪಡೆದುಕೊಂಡು ತಮ್ಮ ಆತಂಕ-ಭಯಗಳನ್ನು ನಿವಾರಿಸಿಕೊಳ್ಳಬೇಕು ಜೊತೆಗೆ ಇತರರೊಂದಿಗೆ ಉತ್ತಮ ಸಹೋದ್ಯೋಗಿಗಳಾಗಿ, ಉತ್ತಮ ಶಿಕ್ಷಕರಾಗಿ ಸಮಾಜಮುಖಿಯಾಗಿ ಶಿಕ್ಷಣ ಕ್ಷೇತ್ರದ ಸುಧಾರಣೆ ಮಾಡಬೇಕು ಎಂದರು.



