ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಹುದಿನಗಳ ಬೇಡಿಕೆಯಾಗಿದ್ದ ವಿಜಯಪುರ-ಮಂಗಳೂರು ರೈಲು ಯವವಿಗಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿರುವದಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.
ವಿಜಯಪುರ-ಮಂಗಳೂರು ನಡುವೆ ಸಂಚರಿಸುವ ಮಂಗಳೂರು ಎಕ್ಸ್ಪ್ರೆಸ್ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಸಂಸದರು ಅಭಿನಂದಿಸಿ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಅರ್ಪಿಸಿರುವ ಅವರು, ವಿಜಯಪುರ-ಮಂಗಳೂರು ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದ ಪ್ರಮುಖ ದೇವಸ್ಥಾನಗಳಾದ ಶ್ರೀ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ ಹಾಗೂ ಬಂದರು ನಗರಿ ಮಂಗಳೂರು ನಗರಕ್ಕೆ ಈ ರೈಲು ನೇರ ಸಂಪರ್ಕವನ್ನು ಒದಗಿಸಲಿದ್ದು, ಇದರ ಸದುಪಯೋಗವನ್ನು ಪಡೆಯಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ.
ಯಲವಿಗಿ ರೈಲು ನಿಲ್ದಾಣದಲ್ಲಿ ವಿಜಯಪುರ-ಮಂಗಳೂರು ಎಕ್ಸ್ ಪ್ರೆಸ್ ರೈಲು ಪ್ರತಿದಿನ ರಾತ್ರಿ 9:49 ಗಂಟೆಗೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.



