* ನ್ಯಾನೋ ಯೂರಿಯಾ ಬಳಕೆಯಿಂದಾಗುವ ಉಪಯೋಗಗಳ ಕುರಿತು ರೈತರಿಗೆ ಅರಿವು ಕಾರ್ಯಕ್ರಮ
ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ವ್ಯವಸಾಯದಲ್ಲಿ ರೈತರು ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ ಎಂದು ಹೊಸಪೇಟೆ ಉಪ ಕೃಷಿ ನಿರ್ದೇಶಕ ಡಾ. ನಹೀನ್ ಪಾಷ ತಿಳಿಸಿದರು.
ಬುಧವಾರ ತಾಲೂಕಿನ ಗೋವೇರಹಳ್ಳಿ ಗ್ರಾಮದಲ್ಲಿ ನ್ಯಾನೋ ಯೂರಿಯಾ ಬಳಕೆಯಿಂದಾಗುವ ಉಪಯೋಗಗಳ ಕುರಿತು ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೂರಿಯಾ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಬೆಳೆಗಳಿಗೆ ಸಾರಜನಕದ ರೂಪದಲ್ಲಿ ಉಪಯುಕ್ತ ಮೂಲವಾದರೂ, ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಮಣ್ಣಿನಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಾಗಿ ಫಲವತ್ತತೆ ಕಳೆದುಕೊಳ್ಳುತ್ತದೆ. ಇದರಿಂದ ನೀರಿನ ಮಾಲಿನ್ಯ ಹಾಗೂ ಹಸಿರುಮನೆಗಳ ಪ್ರಮಾಣ ಏರಿಕೆಯಾಗಬಹುದು, ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು ಎಂದರು.
ಯೂರಿಯಾದಲ್ಲಿ ಹೇರಳವಾದ ಸಾರಜನಕವಿರುವುದರಿಂದ ಸಸ್ಯಗಳಲ್ಲಿ ವಿಷಕಾರಕ ಪ್ರಮಾಣ ಹೆಚ್ಚಾಗಿ ಬೆಳೆಗಳಿಗೆ ಕೀಟ ಬಾಧೆ ಹೆಚ್ಚಾಗಿ ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಯೂರಿಯಾ ಬಳಕೆಯಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರ ಬಳಕೆಯಿಂದ ಬೆಳೆದ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟೈಟ್ ಅಂಶ ಹೆಚ್ಚಾಗುತ್ತದೆ. ಆಗ ಹೊಟ್ಟೆ ನೋವು, ವಾಂತಿ ಹಾಗೂ ಇತರೆ ಕಾಯಿಲೆಗಳು ಬರುತ್ತವೆ ಎಂದು ವಿವರಿಸಿದರು.
ಕೃಷಿ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಮಾತನಾಡಿ, ಯೂರಿಯಾವನ್ನು ಹೇರಳವಾಗಿ ಬಳಕೆ ಮಾಡುವುದರಿಂದ ಮಣ್ಣಿನ ಪಿಹೆಚ್ ಸತ್ವವನ್ನು ಕಡಿಮೆಮಾಡಿ ಅದನ್ನು ಆಮ್ಲಿಯವಾಗಿ ಮಾರ್ಪಾಡುಗೊಳಿಸುತ್ತದೆ. ಆಗ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆಯನ್ನು ಕಡಿಮೆಗೊಳಿಸಿ ಉಪಯುಕ್ತ ಸೂಕ್ಷ್ಮ ಜೀವಿಗಳ ಕ್ರಿಯಾ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತದೆ. ಇದರಿಂದ ಒಟ್ಟು ಮಣ್ಣಿನ ಆರೋಗ್ಯ, ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರೈತರು ನ್ಯಾನೋ ಯೂರಿಯಾವನ್ನು ಬಳಕೆ ಮಾಡುವುದರಿಂದ ರಾಸಾಯನಿಕ ಬಳಕೆ ಕಡಿಮೆ ಮಾಡಿದಂತಾಗುತ್ತದೆ ಮತ್ತು ಬೆಳೆಗಳಲ್ಲಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ. ಮಣ್ಣಿನ ಫಲವತ್ತತೆ ಸಮತೋಲನವನ್ನೂ ಕಾಯ್ದುಕೊಂಡಂತಾಗುತ್ತದೆ ಎಂದರು.
ಎಡಿ ವಿ.ಸಿ. ಉಮೇಶ್, ಎ.ಕೆ. ಹಾಲಪ್ಪ, ಕೃಷಿ ಅಧಿಕಾರಿ ಸಂಘಪ್ಪ ಎಚ್.ಎಲ್, ರೈತ ಸಂಘದ ಮುಖಂಡ ಹನುಮಂತಪ್ಪ, ಕೆಂಚಪ್ಪ ಉಳ್ಳಳ್ಳಿ, ಇಫ್ಕೋ ಕಂಪನಿ ಪ್ರತಿನಿಧಿ ಗೋವಿಂದರಾಜು, ಕೃಷಿ ಪರಿಕರ ಸಂಘದ ಅಧ್ಯಕ್ಷ ನಾಗಲಿಂತಗ ಸ್ವಾಮಿ, ಸದಸ್ಯ ಜಯಂತ್ ಹಾಗೂ ಇತರರಿದ್ದರು.
ಸಾಂಪ್ರದಾಯಿಕ ಯೂರಿಯಾ ಬದಲಾಗಿ, ರೈತರು ತಮ್ಮ ಬೆಳೆಗಳಿಗೆ ನ್ಯಾನೋ ಯೂರಿಯಾ ಬಳಕೆ ಮಾಡಬೇಕು. ಇದು ದ್ರವ ರೂಪದ ರಸಗೊಬ್ಬರವಾಗಿದೆ. ಇದನ್ನು ಪ್ರತಿಷ್ಠಿತ ಇಫ್ಕೋ ಕಂಪನಿಯು ಉತ್ಪಾದನೆ ಮಾಡುತ್ತಿದೆ. ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಹಾಗೂ ಬೆಳೆಗಳಿಗೆ ಬೇಗನೆ ಉತ್ತಮವಾದ ಗುಣಮಟ್ಟದ ಪೋಷಕಾಂಶಗಳನ್ನು ನೀಡುತ್ತದೆ ಎಂದು ಡಾ. ನಹೀನ್ ಪಾಷ ತಿಳಿಸಿದರು.



