ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘45’ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅರ್ಜುನ್ ಜನ್ಯ ನಿರ್ದೇಶನದ ಈ ಸಿನಿಮಾಗೆ ಅಭಿಮಾನಿಗಳು ಕಾಯ್ತಿದ್ದಾರೆ. ಈ ಮೊದಲು ಚಿತ್ರತಂಡ ಆಗಸ್ಟ್ 15 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅಂದುಕೊಂಡ ದಿನದಂದು ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಚಿತ್ರತಂಡ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
‘45’ ಸಿನಿಮಾ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಹೇಳಿರುವಂತೆ, ‘45’ ಸಿನಿಮಾದ ವಿತರಣೆ ಹಕ್ಕಿಗಾಗಿ ಮೈತ್ರಿ ಮೂವಿ ಮೇಕರ್ಸ್ನವರು ಸಂಪರ್ಕ ಮಾಡಿದ್ದರಂತೆ. ಆದರೆ ಸಿನಿಮಾದ ಪೂರ್ಣ ಕೆಲಸ ಮುಗಿಸಿ, ಅದನ್ನು ವಿತರಕರಿಗೆ ತೋರಿಸಿದ ಬಳಿಕವಷ್ಟೆ ವಿತರಣೆ ಹಕ್ಕು ಮಾರಾಟ ಮಾಡುವ ಯೋಜನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದಾರಂತೆ.
ಆಗಸ್ಟ್ 15ಕ್ಕೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ಬಿಡುಗಡೆ ತಡವಾಗಲು ವಿಎಫ್ಎಕ್ಸ್ ಕಾರಣವಂತೆ. ಅನೇಕ ಬ್ಲಾಕ್ ಬಸ್ಟರ್, ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿರುವ ಮಾರ್ಜ್ ಸಂಸ್ಥೆ ‘45’ ಸಿನಿಮಾಕ್ಕೂ ವಿಎಫ್ಎಕ್ಸ್ ಮಾಡುತ್ತಿದ್ದು, ಸಿನಿಮಾನಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಪ್ರಮುಖವಾಗಿದ್ದು ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಆಗಲಿಲ್ಲವಂತೆ. ಹೀಗಾಗಿ ಇದೀದ ಹೊಸ ದಿನಾಂಕದಂದು ತೆರೆಗೆ ಬರಲು ‘45’ ಸಿನಿಮಾ ಮುಂದಾಗಿದೆ.



