ರಾಮನಗರ: ಬಿಡದಿ ಸಮೀಪದ ರೆಸಾರ್ಟ್ನಲ್ಲಿ ತಂಗಿರುವ ಒಡಿಶಾ ಕಾಂಗ್ರೆಸ್ ಶಾಸಕರು ಇಂದು ಮೈಸೂರು ಪ್ರವಾಸ ಕೈಗೊಂಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಹಿನ್ನೆಲೆಯಲ್ಲಿ 8 ಮಂದಿ ಶಾಸಕರು, ಪಿಸಿಸಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಸೇರಿ ಒಟ್ಟು 15ಕ್ಕೂ ಹೆಚ್ಚು ಮಂದಿ ಮೈಸೂರಿಗೆ ತೆರಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅವರು ಇಂದು ಸಂಜೆವರೆಗೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿದ್ದಾರೆ.
ಮಾರ್ಚ್ 16ರಂದು ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 10 ರಾಜ್ಯಗಳ ಶಾಸಕರು ಮತದಾನ ಮಾಡುವರು. ಈ ಪೈಕಿ ಒಡಿಶಾದಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯದಂತೆ ತಡೆಯುವ ಉದ್ದೇಶದಿಂದ ಒಡಿಶಾ ಕಾಂಗ್ರೆಸ್ ಶಾಸಕರನ್ನು ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್ಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಒಡಿಶಾ ರಾಜಕೀಯದಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಆಡಳಿತಾರೂಢ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಅಡ್ಡ ಮತದಾನಕ್ಕೆ ಯತ್ನಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ನಾಲ್ಕನೇ ಸ್ಥಾನಕ್ಕಾಗಿ ಬಿಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಮತ್ತೊಂದೆಡೆ, ಹೋಟೆಲ್ ಉದ್ಯಮಿ ಹಾಗೂ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.



