ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಾರ್ಡ್ ನಂ. 25ರಲ್ಲಿ ಹಾಳದಿಬ್ಬ ಓಣಿಯ ಶ್ರೀ ಗಜಾನನ ಯುವಕ ಮಂಡಳದ ವತಿಯಿಂದ ಮಂಗಳವಾರ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ಕಳೆದ 32 ವರ್ಷಗಳಿಂದ ಗಜಾನನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ ದಂಪತಿಗಳು ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳರವರ 15ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಾಯಕ ಮಾನ್ವಿ, ಡಾ. ಪಂಡಿತ ಪುಟ್ಟರಾಜ ಗವಾಯಿಗಳವರು ಲಕ್ಷಾಂತರ ಅಂಧ, ಅನಾಥ ಮಕ್ಕಳಿಗೆ ಆಶ್ರಯ ನೀಡಿ ಸಂಗೀತ ಮತ್ತು ಶೈಕ್ಷಣಿಕ ದಾಸೋಹದ ಮೂಲಕ ನಡೆದಾಡುವ ದೇವರು ಎಂದು ಪ್ರಖ್ಯಾತರಾಗಿದ್ದಾರೆ. ಅವರ ಸ್ಮರಣೆಯೊಂದಿಗೆ ಈ ಮಹಾಅನ್ನಸಂತರ್ಪಣೆ ಪ್ರತಿ ವರ್ಷ ಜರುಗುವುದು ಎಂದು ನುಡಿದರು.
ಓಣಿಯ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಪ್ರಸಾದ ಸ್ವೀಕರಿಸಿ ಶ್ರೀ ಗಣೇಶ ಮತ್ತು ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪೆಗೆ ಪಾತ್ರರಾದರು.



