ರಾಯಚೂರು: ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆಯ ಬಗ್ಗೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿಕೊಳ್ಳಲಿ.
ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ ನೌಕರರು ಹೊರಗಡೆ ವೀಕ್ಷಣೆಯನ್ನು ಮಧ್ಯಾಹ್ನ 12 ರಿಂದ 3ರ ವರೆಗೆ ಮಾಡಬಾರದು. ಬೆಳಗಿನ ಜಾವ ಅಥವಾ ಸಾಯಂಕಾಲ ಮಾಡಬೇಕು. ಸರ್ಕಾರ ರಜೆ ಕೊಡಬೇಕು ಅಂತ ಹೇಳುವುದಿಲ್ಲ, ಸಮಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು ಎಂದರು.
ರಾಯಚೂರು ಜಿಲ್ಲೆ ಸೇರಿ ಈ ಭಾಗದಲ್ಲಿ 43 ರಿಂದ 44 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಹೋಗುತ್ತದೆ. ಮಧ್ಯಾಹ್ನ ಸಮಯದಲ್ಲಿ ಮನೆಯೊಳಗೆ ಅಥವಾ ಕಚೇರಿಯೊಳಗೆ ಇರುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಶಾಲೆಗಳು, ಎಲ್ಲಾ ಸಂಸ್ಥೆಗಳು ಆ ಬಗ್ಗೆ ಗಮನ ಕೊಡಬೇಕು. ಆಹಾರದ ಬಗ್ಗೆಯೂ ಗಮನ ಕೊಡಬೇಕು. ಆಗಾಗ ನೀರು ಕುಡಿದರೆ ನಿರ್ಜಲೀಕರಣದಿಂದ ದೂರ ಇರಬಹುದು ಎಂದು ಹೇಳಿದರು.



