ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ನಡೆದ ಅಕ್ರಮ ಮದ್ಯಪಾನ ಪಾರ್ಟಿ ಪ್ರಕರಣದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪ ಮತ್ತು ಪ್ರಕರಣವನ್ನು ಮೇಲಧಿಕಾರಿಗಳಿಂದ ಮುಚ್ಚಿಟ್ಟಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮದ್ದೂರು ವನ್ಯಜೀವಿ ವಲಯದ ಆರ್‌ಎಫ್‌ಒ ಡಿ. ಪುನೀತ್ ಕುಮಾರ್ ಅವರನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ‘ಹುಲಿ ಕಟ್ಟೆ’ ಪ್ರದೇಶದಲ್ಲಿರುವ ಕಳ್ಳಬೇಟೆ ತಡೆ ಶಿಬಿರದ ಎದುರಲ್ಲೇ ರೌಡಿಶೀಟರ್ ಸತೀಶ್ ಅಲಿಯಾಸ್ ಮಹದೇವಪ್ರಸಾದ್ ಹಾಗೂ ಆತನ ಸಹಚರರು ಗಂಗಾಧರ್ ಮತ್ತು ಚೇತನ್ ಮದ್ಯಪಾನ ಪಾರ್ಟಿ ನಡೆಸಿದ್ದಾರೆ. ಶಿಬಿರದ ಸೌರ ಫಲಕವನ್ನು ಮೇಜಾಗಿ ಬಳಸಿಕೊಂಡು ಮದ್ಯದ ಬಾಟಲಿ, ಲೋಟ ಮತ್ತು ಆಹಾರ ಸಾಮಗ್ರಿಗಳೊಂದಿಗೆ ಮೋಜು ಮಾಡಿರುವುದು ಫೋಟೋಗಳಲ್ಲಿ ಸ್ಪಷ್ಟವಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು.
ತನಿಖೆಯಲ್ಲಿ ಆರ್‌ಎಫ್‌ಒ ಪುನೀತ್ ಕುಮಾರ್ ಅವರು ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಇರುವುದು ಹಾಗೂ ಆರೋಪಿಗಳ ವಿವರಗಳನ್ನು ದಾಖಲಿಸದೇ ಇರುವುದರಿಂದ ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟಿದೆ.
ಅರಣ್ಯ ಇಲಾಖೆ ಈಗ ಮೂವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಅವರನ್ನು ಪತ್ತೆ ಹಚ್ಚಲು ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.



