Home Blog Page 70

ಹೊಸ ಮದ್ಯ ತೆರಿಗೆ ನೀತಿ ಎಫೆಕ್ಟ್; ರಾಜ್ಯದ ಅಬಕಾರಿ ಆದಾಯದಲ್ಲಿ ಭಾರೀ ಏರಿಕೆ!

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ‘ಆಲ್ಕೋಹಾಲ್ ಇನ್ ಬಿವರೇಜ್’ ತೆರಿಗೆ ನೀತಿಯಿಂದ ಅಬಕಾರಿ ಇಲಾಖೆಯ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ.

ಮೇ 11ರಿಂದ ಜಾರಿಗೆ ಬಂದಿರುವ ಈ ನೀತಿಯಡಿ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಗ್ರಾಹಕರ ಮದ್ಯ ಖರೀದಿ ಶೈಲಿಯಲ್ಲೂ ಬದಲಾವಣೆ ಕಂಡುಬಂದಿದೆ. ಹಾರ್ಡ್ ಲಿಕ್ಕರ್‌ಗಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಬಿಯರ್‌ಗಳತ್ತ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಜೂನ್‌ವರೆಗಿನ ಮೊದಲ ತ್ರೈಮಾಸಿಕದಲ್ಲಿ ಬಿಯರ್ ಮಾರಾಟದಿಂದಲೇ ಸರ್ಕಾರಕ್ಕೆ 312.67 ಕೋಟಿ ರೂ. ಹೆಚ್ಚುವರಿ ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,602.14 ಕೋಟಿ ರೂ. ಆದಾಯ ಬಂದಿದ್ದರೆ, ಈ ಬಾರಿ 1,914.81 ಕೋಟಿ ರೂ. ಸಂಗ್ರಹವಾಗಿದೆ.

ಭಾರತೀಯ ಮದ್ಯ (IML) ಮಾರಾಟದಿಂದಲೂ ಆದಾಯ ಹೆಚ್ಚಾಗಿದ್ದು, ಕಳೆದ ವರ್ಷದ 7,407.53 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ 8,394.32 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಒಟ್ಟಾರೆಯಾಗಿ ಮೊದಲ ತ್ರೈಮಾಸಿಕದಲ್ಲಿ ಅಬಕಾರಿ ಇಲಾಖೆ 10,599.29 ಕೋಟಿ ರೂ. ರಾಜಸ್ವ ಸಂಗ್ರಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.14.39ರಷ್ಟು ಬೆಳವಣಿಗೆ ಕಂಡಿದೆ.

ಹೊಸ ತೆರಿಗೆ ನೀತಿಯಿಂದಾಗಿ ಪ್ರೀಮಿಯಂ ಲಾಗರ್ ಬಿಯರ್‌ಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಕೆಲವು ಪ್ರೀಮಿಯಂ ಬಿಯರ್‌ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.

ಇನ್ನು 2026-27ರ ಹಣಕಾಸು ವರ್ಷಕ್ಕೆ ಸರ್ಕಾರವು 45,000 ಕೋಟಿ ರೂ. ಅಬಕಾರಿ ಆದಾಯದ ಗುರಿ ಹೊಂದಿದ್ದು, ಆದಾಯ ಹೆಚ್ಚಳಕ್ಕಾಗಿ ಬಳಕೆಯಾಗದ ಹಾಗೂ ರದ್ದಾದ ಮದ್ಯದಂಗಡಿ ಮತ್ತು ಬಾರ್ ಪರವಾನಗಿಗಳನ್ನು ಆನ್‌ಲೈನ್ ಹರಾಜು ಮೂಲಕ ವಿಲೇವಾರಿ ಮಾಡಲು ಇಲಾಖೆ ಮುಂದಾಗಿದೆ.

ಬದರಿನಾಥ ದೇವಾಲಯದ ದೇಣಿಗೆ ಹಣ ದುರುಪಯೋಗ ಆರೋಪ; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ!

ಡೆಹ್ರಾಡೂನ್: ಉತ್ತರಾಖಂಡದ ಪ್ರಸಿದ್ಧ ಬದರಿನಾಥ ದೇವಾಲಯದಲ್ಲಿ ಭಕ್ತರು ನೀಡಿದ ಕಾಣಿಕೆ ಹಾಗೂ ದೇಣಿಗೆ ಹಣ ದುರುಪಯೋಗವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ ರಚಿಸಲಾಗಿರುವ ಸಮಿತಿಗೆ ಗರ್ವಾಲ್ ಆಯುಕ್ತ ಆನಂದ್ ಸ್ವರೂಪ್ ನೇತೃತ್ವ ವಹಿಸಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಹಾಗೂ ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಸಮಿತಿಯ ಸದಸ್ಯರಾಗಿದ್ದಾರೆ.

ದೇಣಿಗೆ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಜೊತೆಗೆ ದೇವಸ್ಥಾನದ ಆಡಳಿತ ವ್ಯವಸ್ಥೆ ಹಾಗೂ ಹಣ ಎಣಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸುವ ಜವಾಬ್ದಾರಿಯನ್ನೂ ನೀಡಲಾಗಿದೆ.

ಇದೇ ವೇಳೆ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಆಂತರಿಕ ತನಿಖೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಅಕ್ರಮದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದೇವಾಲಯ ಸಮಿತಿಯ ಖಾಸಗಿ ಕಾರ್ಯದರ್ಶಿ ಪ್ರಮೋದ್ ನೌಟಿಯಾಲ್ ಅವರನ್ನು ಅಮಾನತು ಮಾಡಲಾಗಿದೆ.

ಬದರಿನಾಥ ಧಾಮದಲ್ಲಿ ಕಾಣಿಕೆ ಹಣ ಎಣಿಕೆ ವೇಳೆ ಅಕ್ರಮ ನಡೆದಿದೆ ಎನ್ನಲಾದ ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯ ಸಂಘಟನೆಯೊಂದು ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿತ್ತು.

ಇನ್ನು ಎಣಿಕೆ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ಬದಲಾವಣೆ ಕುರಿತು ವಿವಾದ ಉಂಟಾಗಿದ್ದು, ಇದು ನಿಯಮಿತ ಪ್ರಕ್ರಿಯೆ ಎಂದು ದೇವಾಲಯ ಸಮಿತಿ ಸ್ಪಷ್ಟನೆ ನೀಡಿದೆ. ಹಳೆಯ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದ್ದು, ತನಿಖಾ ತಂಡಕ್ಕೆ ನೀಡಲಾಗುವುದು ಎಂದು ತಿಳಿಸಿದೆ.

ಹೇಮಾವತಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು; ಬೇಲೂರು ಭಾಗದ ಶಾಲೆಗಳಿಗೆ ರಜೆ ಘೋಷಣೆ!

ಹಾಸನ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ಭಾಗಗಳಲ್ಲಿ ಭಾರೀ ಗಾಳಿ ಸಹಿತ ನಿರಂತರ ಮಳೆಯಾಗುತ್ತಿದೆ.

ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.

ಸದ್ಯ ಹೇಮಾವತಿ ಜಲಾಶಯಕ್ಕೆ 16,593 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 18.782 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ನೀರಿನ ಮಟ್ಟ 2898.40 ಅಡಿಗಳಷ್ಟಿದೆ.

ಇನ್ನು ಬೇಲೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೆಲವು ಭಾಗಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಅರೇಹಳ್ಳಿ, ಬಿಕ್ಕೋಡು, ಚೀಕನಹಳ್ಳಿ ಹೋಬಳಿಗಳು ಹಾಗೂ ಕಸಬಾ ಎ, ಕಸಬಾ ಬಿ ವಲಯಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ನೀಡಲಾಗಿದೆ.

ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರು ಈ ಆದೇಶ ಹೊರಡಿಸಿದ್ದು, ರಜೆ ನೀಡಿದ ದಿನದ ಬದಲಿಗೆ ಶನಿವಾರ ಪೂರ್ಣ ದಿನ ಶಾಲೆ ನಡೆಸುವಂತೆ ಸೂಚಿಸಿದ್ದಾರೆ.

ಮಲೆನಾಡಿನಲ್ಲಿ ಮಳೆಯ ಎಫೆಕ್ಟ್; ಉಕ್ಕಡಗಾತ್ರಿ ಕ್ಷೇತ್ರಕ್ಕೆ ನುಗ್ಗಿದ ತುಂಗಭದ್ರಾ ನೀರು!

ದಾವಣಗೆರೆ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪ್ರಸಿದ್ಧ ಉಕ್ಕಡಗಾತ್ರಿ ಅಜ್ಜಯ್ಯ ದೇವಸ್ಥಾನದ ಮುಂಭಾಗಕ್ಕೆ ನೀರು ನುಗ್ಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ತುಂಗಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗಿದೆ. ಇದರಿಂದ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ನೀರಿನ ಮಟ್ಟ ಹೆಚ್ಚಾದ ಪರಿಣಾಮ ಭಕ್ತರು ಪವಿತ್ರ ಸ್ನಾನ ಮಾಡುವ ಪ್ರಮುಖ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಸ್ನಾನಘಟ್ಟದ ಸಮೀಪದಲ್ಲಿದ್ದ ಹತ್ತಕ್ಕೂ ಹೆಚ್ಚು ಪೂಜಾ ಸಾಮಗ್ರಿ ಹಾಗೂ ಇತರೆ ವ್ಯಾಪಾರಿಗಳ ಅಂಗಡಿಗಳಿಗೆ ನೀರು ನುಗ್ಗಿದ್ದು, ಜಲಾವೃತಗೊಂಡಿವೆ.

ಪರಿಸ್ಥಿತಿಯ ಗಂಭೀರತೆ ಅರಿತ ದೇವಸ್ಥಾನದ ಆಡಳಿತ ಮಂಡಳಿ, ನದಿ ತೀರದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ಪಾತ್ರಕ್ಕೆ ಇಳಿಯಬಾರದು ಎಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಭಕ್ತರ ಸುರಕ್ಷತೆಗಾಗಿ ನದಿ ತೀರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

GBA ವಿರುದ್ಧ ಬೀದಿ ಬದಿ ವ್ಯಾಪಾರಿಗಳ ಸಮರ; ಇಂದು ವ್ಯಾಪಾರ ಬಂದ್, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ!

ಬೆಂಗಳೂರು: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಇಂದು ಬಂದ್‌ಗೆ ಕರೆ ನೀಡಿದ್ದಾರೆ.

ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ವ್ಯಾಪಾರಿಗಳು ಸಜ್ಜಾಗಿದ್ದಾರೆ.

ಬೆಂಗಳೂರಿನಲ್ಲಿ GBA ಕೈಗೊಂಡಿರುವ ಕ್ಲೀನ್ ಫುಟ್‌ಪಾತ್ ಕಾರ್ಯಾಚರಣೆ ವಿರುದ್ಧ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವು ಕಾರ್ಯ ನಿಲ್ಲಿಸಬೇಕು ಹಾಗೂ ಸರ್ಕಾರ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಕೆ.ಆರ್. ಮಾರ್ಕೆಟ್, ಸಾರಕ್ಕಿ ಮಾರ್ಕೆಟ್, ಜಯನಗರ ಮಾರ್ಕೆಟ್, ಗಾಂಧಿ ಬಜಾರ್, ಬನಶಂಕರಿ, ಮಲ್ಲೇಶ್ವರ, ಮಹದೇವಪುರ, ಆರ್.ಆರ್. ನಗರ ಸೇರಿದಂತೆ ನಗರದ ಹಲವು ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿ-ವ್ಯವಹಾರಗಳನ್ನು ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ.

ಆರು ಸಂಘಟನೆಗಳು ಒಟ್ಟಾಗಿ ಕರೆ ನೀಡಿರುವ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಸಂಘಟಕರು ಈಗಾಗಲೇ ಬೀದಿ ಬದಿ ವ್ಯಾಪಾರಿಗಳನ್ನು ಭೇಟಿ ಮಾಡಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬೀದಿ ಬದಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಕೆಲ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಬೀದಿ ಬದಿ ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು:

  • ತೆರವುಗೊಳಿಸಿದ ಸ್ಥಳಗಳಲ್ಲಿ ಮತ್ತೆ ವ್ಯಾಪಾರಕ್ಕೆ ಅವಕಾಶ ನೀಡಬೇಕು.
  • ಜಪ್ತಿ ಮಾಡಿರುವ ಸಾಮಗ್ರಿಗಳನ್ನು ವಾಪಸ್ ನೀಡಬೇಕು.
  • ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು.
  • ಸಮೀಕ್ಷೆ ನಡೆಸಿ ಅರ್ಹ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು.
  • ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಬೇಕು.
  • ನಿಜವಾದ ಒತ್ತುವರಿದಾರರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕು.

ಇದೇ ವೇಳೆ ಕೆಲವು ಬೀದಿ ಬದಿ ವ್ಯಾಪಾರಿ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿಲ್ಲ. ಎಂದಿನಂತೆ ತಮ್ಮ ವ್ಯಾಪಾರ ಮುಂದುವರಿಸುವುದಾಗಿ ಕೆಲವು ಸಂಘಟನೆಗಳು ತಿಳಿಸಿವೆ.

ಕೋಲಾರದಲ್ಲಿ ಅಮಾನವೀಯ ಕೃತ್ಯ; ಮೇವು ತರಲು ಹೋದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ!?

ಕೋಲಾರ: 70 ವರ್ಷದ ವೃದ್ಧೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಚಾಕರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ನಾರಾಯಣಮ್ಮ (70) ಎಂದು ಗುರುತಿಸಲಾಗಿದೆ. ಹಸುಗಳಿಗೆ ಮೇವು ತರಲು ಹೊಲಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ವೇಮಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಯ ಸಂಪೂರ್ಣ ಮಾಹಿತಿ ತನಿಖೆಯ ಬಳಿಕ ತಿಳಿದುಬರಲಿದೆ.

ಕೊಡಗಿನಲ್ಲಿ ಮಳೆ ಅಬ್ಬರ: ಕೆಆರ್‌ಎಸ್ ಡ್ಯಾಂಗೆ ಹೆಚ್ಚಿದ ನೀರು, ರೈತರಲ್ಲಿ ಸಂತಸ!

ಮಂಡ್ಯ: ಕಾವೇರಿ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಕ್ಕೆ ಸದ್ಯ 7,531 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಬೆಳಗ್ಗೆ 5,734 ಕ್ಯೂಸೆಕ್ ಇದ್ದ ಒಳಹರಿವು ಇಂದು ಹೆಚ್ಚಳವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 81.55 ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 49.452 ಟಿಎಂಸಿ ಇದ್ದು, ಪ್ರಸ್ತುತ 12.485 ಟಿಎಂಸಿ ನೀರು ಸಂಗ್ರಹವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ದೊಡ್ಡಬಳ್ಳಾಪುರದಲ್ಲಿ ಭೀಕರ ಅಪಘಾತ; ಕಾರು ಡಿಕ್ಕಿ ಹೊಡೆದ ಬೆನ್ನಲ್ಲೇ ಧರೆಗುರುಳಿದ ವಿದ್ಯುತ್ ಕಂಬಗಳು!

ಬೆಂಗಳೂರು ಗ್ರಾಮಾಂತರ: ಅತಿವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ದೊಡ್ಡಬಳ್ಳಾಪುರದ ಚೆನ್ನದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಎದುರು ನಡೆದಿದೆ.

ನೆಲಮಂಗಲದಿಂದ ದೊಡ್ಡಬಳ್ಳಾಪುರದ ಕಡೆಗೆ ತೆರಳುತ್ತಿದ್ದ ಕಾರು, ತಿರುವಿನಲ್ಲಿ ವೇಗ ಹೆಚ್ಚಿದ್ದ ಕಾರಣ ನಿಯಂತ್ರಣ ತಪ್ಪಿ ಕಂಬಗಳಿಗೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಎರಡು ಕಂಬಗಳು ತುಂಡಾಗಿವೆ.

ಘಟನೆಯ ದೃಶ್ಯ ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರಿನ ಮಾಲೀಕರ ಮಾಹಿತಿ ಕಲೆಹಾಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ತವ್ಯದಲ್ಲೇ ಪೊಲೀಸ್ ಪೇದೆ ಆತ್ಮಹತ್ಯೆ! ಸರ್ಕಾರಿ ರೈಫಲ್‌ನಿಂದ ಶೂಟ್ ಮಾಡಿಕೊಂಡು ಸಾವು

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಸರ್ಕಾರಿ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಕಲಬುರಗಿ ನಗರ ಸಶಸ್ತ್ರ ಮೀಸಲು ಪಡೆಯ (CAR) ಪೇದೆ ಶಿವಕುಮಾರ್ ಮಾವನೂರ್ (32) ಎಂದು ಗುರುತಿಸಲಾಗಿದೆ. ಅವರು ಮೂರು ತಿಂಗಳ ಹಿಂದೆ ಬೆಂಗಳೂರಿನಿಂದ ಕಲಬುರಗಿಗೆ ವರ್ಗಾವಣೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಕರ್ತವ್ಯದ ವೇಳೆ ಪೊಲೀಸ್ ವಾಹನದಲ್ಲಿದ್ದ ಶಿವಕುಮಾರ್ ಅವರು ತಮ್ಮ ಬಳಿ ಇದ್ದ ಸರ್ಕಾರಿ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಸಹೋದ್ಯೋಗಿಗಳು ಸ್ಥಳಕ್ಕೆ ಧಾವಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಉಪ ಪೊಲೀಸ್ ಆಯುಕ್ತ ಶಾಲೂ ಉದ್ಯೋಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

 

ಬೆಳೆ ವಿಮೆಗೆ ಬ್ಯಾಂಕ್‌ಗಳೇ ಅಡ್ಡಗಾಲು!

ವಿಜಯಸಾಕ್ಷಿ ಸುದ್ದಿ, ನರಗುಂದ-ಕೊಣ್ಣೂರ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಪುನರ್‌ರೂಪಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಬೆಳೆಸಾಲ ಪಡೆದ ರೈತರು ಕಡ್ಡಾಯವಾಗಿ ಬ್ಯಾಂಕ್‌ಗಳ ಮೂಲಕವೇ ನೋಂದಣಿ ಮಾಡಿಸಬೇಕು ಎಂಬ ಸರ್ಕಾರದ ಆದೇಶ ಜಾರಿಯಲ್ಲಿದ್ದರೂ, ಹಲವು ಬ್ಯಾಂಕ್‌ಗಳು ಬೆಳೆ ವಿಮೆ ನೋಂದಣಿಯಲ್ಲಿ ನಿರಾಸಕ್ತಿ ತೋರುತ್ತಿವೆ. ಇದರಿಂದ ಸಾವಿರಾರು ರೈತರು ವಿಮಾ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಿಸುತ್ತಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಆತಂಕ ಕಾಡುತ್ತಿದ್ದರೂ ಜಿಲ್ಲೆಯಲ್ಲಿ ಇದುವರೆಗೆ ಕೇವಲ ಶೇ.10ರಷ್ಟು ರೈತರು ಮಾತ್ರ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆಯುವ ರೈತರಿಗೆ ವಿಮೆ ನೋಂದಣಿ ಮಾಡಿಸುವ ಬದಲು, “ಬೆಳೆ ವಿಮೆ ಮಾಡಿಸಿಕೊಳ್ಳುವುದಿಲ್ಲ (ಆಪ್ಟ್ ಔಟ್)” ಎಂಬ ಘೋಷಣೆಗೆ ಸಹಿ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೆಳೆಸಾಲ ಪಡೆದ ರೈತರು ಸಿಎಸ್‌ಸಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸ್ವಯಂ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಹಿಂದೆ ಮಧ್ಯವರ್ತಿಗಳು ರೈತರ ಪರವಾಗಿ ಪ್ರೀಮಿಯಂ ಪಾವತಿಸಿ, ನಂತರ ವಿಮೆ ಪರಿಹಾರದಲ್ಲಿ ಪಾಲು ಪಡೆಯುವ ದಂಧೆ ನಡೆಸುತ್ತಿದ್ದರು. ಇದನ್ನು ತಡೆಯುವ ಉದ್ದೇಶದಿಂದಲೇ ಕೇಂದ್ರ ಸರ್ಕಾರದ ನಿರ್ದೇಶನದಂತೆ ಬ್ಯಾಂಕ್‌ಗಳ ಮೂಲಕವೇ ಬೆಳೆ ವಿಮೆ ನೋಂದಣಿ ಕಡ್ಡಾಯಗೊಳಿಸಲಾಗಿದೆ.

ಆದರೆ ಈಗ ಬ್ಯಾಂಕ್‌ಗಳೇ ನೋಂದಣಿಯಿಂದ ಹಿಂದೆ ಸರಿಯುತ್ತಿರುವುದರಿಂದ ಸರ್ಕಾರದ ಉದ್ದೇಶವೇ ವಿಫಲವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ಹೆಚ್ಚಿನ ಸಾಲ ಪಡೆಯಲು ಬ್ಯಾಂಕ್ ದಾಖಲೆಗಳಲ್ಲಿ ಈರುಳ್ಳಿ, ಹತ್ತಿ, ಮೆಣಸಿನಕಾಯಿ ಮೊದಲಾದ ಬೆಳೆಗಳನ್ನು ನಮೂದಿಸುತ್ತಾರೆ. ಆದರೆ ವಾಸ್ತವದಲ್ಲಿ ಹೆಸರು, ಮುಸುಕಿನ ಜೋಳ, ಸೂರ್ಯಕಾಂತಿ ಸೇರಿದಂತೆ ಬೇರೆ ಬೆಳೆಗಳನ್ನು ಬಿತ್ತಿರುತ್ತಾರೆ. ಬ್ಯಾಂಕ್ ದಾಖಲೆಯಲ್ಲಿರುವ ಬೆಳೆಗೆ ಮಾತ್ರ ವಿಮೆ ಅನ್ವಯವಾಗುವುದರಿಂದ ಜಿಪಿಎಸ್ ಹಾಗೂ ಆಡಿಟ್ ಪರಿಶೀಲನೆ ವೇಳೆ ರೈತರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

“ಬಹುತೇಕ ರೈತರು ಬ್ಯಾಂಕ್‌ನಲ್ಲಿ ಒಂದು ಬೆಳೆಯ ಹೆಸರಿನಲ್ಲಿ ಸಾಲ ಪಡೆದು, ಹೊಲದಲ್ಲಿ ಇನ್ನೊಂದು ಬೆಳೆ ಬೆಳೆದಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿಮೆ ಮತ್ತು ಜಿಪಿಎಸ್ ಪರಿಶೀಲನೆ ವೇಳೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ.”

– ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿ