Home Blog Page 718

ಸಿದ್ದರಾಮಯ್ಯರ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಈ ಬಜೆಟ್ ಉಜ್ವಲ ಸಾಕ್ಷಿಯಾಗಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಬಜೆಟ್ ಗಾತ್ರವನ್ನು 4.48 ಲಕ್ಷ ಕೋಟಿ ರೂ.ಗೆ ಏರಿಸಿರುವುದು ರಚನಾತ್ಮಕ ಕ್ರಮವಾಗಿದ್ದು, ಅದಕ್ಕೆ ತಕ್ಕಂತೆ ಬಂಡವಾಳ ವೆಚ್ಚವನ್ನೂ ಘೋಷಿಸಿದ್ದಾರೆ ಎಂದು ಹೇಳಿದರು.

ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ರೈತ ಕಲ್ಯಾಣ, ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಸುಸ್ಥಿರ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

ಅದೇ ವೇಳೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಭೂಸ್ವಾಧೀನಕ್ಕಾಗಿ ಪ್ರತಿ ಎಕರೆ ಕೃಷಿ ಜಮೀನಿಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸಿರುವುದು ರೈತರಿಗೆ ಸಂದ ಜಯವಾಗಿದೆ ಎಂದು ತಿಳಿಸಿದರು. ಜೊತೆಗೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅಭಿಪ್ರಾಯಪಟ್ಟರು.

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್: ಒಳ್ಳೆಯ ನಿರ್ಧಾರ ಎಂದ ಸಚಿವ ಲಾಡ್

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ತನ್ನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ಮತ್ತು ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಂಡಿದೆ. ಈ ಕ್ರಮವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸ್ವಾಗತಿಸಿದ್ದಾರೆ.

ಬೆಂಗಳೂರಿನ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಈ ನಿರ್ಧಾರ ಸಹಾಯಕವಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನವು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. “ಇಂದು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದಿನಕ್ಕೆ ಏಳು-ಎಂಟು ಗಂಟೆಗಳಷ್ಟು ಸ್ಕ್ರೀನ್ ಟೈಮ್ ಬಳಸುತ್ತಿದ್ದಾರೆ. ನಮ್ಮ ಸ್ಕ್ರೀನ್ ಟೈಮ್ ಕೂಡ ಏಳೆಂಟು ಗಂಟೆ ಆಗುತ್ತಿದೆ. ಇದು ಒಳ್ಳೆಯ ಪ್ರವೃತ್ತಿಯಲ್ಲ,” ಎಂದು ಹೇಳಿದರು.

ಆದ್ದರಿಂದ ಮೊಬೈಲ್ ಬಳಕೆಗೆ ಕಡ್ಡಾಯವಾಗಿ ನಿಯಮಿತ ಮಿತಿಯನ್ನು ಇರಿಸಿಕೊಳ್ಳಬೇಕು. ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರೂ ತಮ್ಮ ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದು ಸಚಿವ ಸಂತೋಷ್ ಲಾಡ್ ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್, ಸ್ಟೇಟ್ ದರ್ಜೆ ಆಸಾಮಿಗಳ ಕಿಸೆಗೆ ಸಾಲದ ಹಣ ಹೋಗುತ್ತಿದೆ; HDK ಆರೋಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ಕಾಂಗ್ರೆಸ್ ನಾಯಕರನ್ನು ಸಾಕುತ್ತಿದೆ. ಸರಕಾರವು ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ರಾಜ್ಯದ್ದು ಈಗ ₹4.48 ಲಕ್ಷ ಕೋಟಿ ಗಾತ್ರದ ಬಜೆಟ್ ಆಗಿದ್ದು ರಾಜ್ಯದ ಈಗಿನ ಒಟ್ಟು ಸಾಲ ₹8.24 ಲಕ್ಷ ಕೋಟಿ ಆಗಿದೆ. ಈ ಸಾಲ ಕಳೆದ ವರ್ಷದಿಂದ ಈ ವರ್ಷಕ್ಕೆ ₹1.16 ಲಕ್ಷ ಕೋಟಿಯಿಂದ ₹1.32 ಲಕ್ಷ ಕೋಟಿಗೆ ಏರಿದೆ!! ಮುಂದಿನ ವರ್ಷಕ್ಕೆ ₹9 ಲಕ್ಷ ಕೋಟಿ ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಲದ ದುಡ್ಡು ಕಾಂಗ್ರೆಸ್ಸಿಗರ ಕಿಸೆಗೆ ಹೋಗಿ ಸೇರುತ್ತಿದೆ:

ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು,

ಈ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂಬರುವ ಸರಕಾರಗಳಿಗೆ ಕಾಂಗ್ರೆಸ್ ಸರಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಸ್ಲೋಗನ್ ರಾಮಯ್ಯ ಎಂದು ಲೇವಡಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸ್ಲೋಗನ್ ರಾಮಯ್ಯ’ ಎಂದು ಮೂದಲಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸಿದ್ದರಾಮಯ್ಯನವರು ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಿವೆ. ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೇಂದ್ರ ನಿಂದನೆ ಸರಿಯಲ್ಲ:

ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಏಕೆಂದರೆ, ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ.

16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 3.61%ರಿಂದ 4.7%ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ ₹11,000 ಕೋಟಿಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ! ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಮುಖ್ಯಮಂತ್ರಿಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿದ್ದರಾಮಯ್ಯ ಬಜೆಟ್ ವಿರುದ್ಧ ಬಿಜೆಪಿ ಹೋರಾಟ: ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಇಂದು ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

‘ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್ ಸರ್ಕಾರ’ ಎಂಬ ಬರಹವಿರುವ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ನಾಯಕರು ಕೈಯಲ್ಲಿ ಖಾಲಿ ಚೊಂಬು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಈ ವೇಳೆ “ಯುವಕರಿಗೆ ಮೋಸ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಮೂರು ವರ್ಷದಲ್ಲಿ ಮೂರೂವರೆ ಲಕ್ಷ ಕೋಟಿ ಸಾಲ ಮಾಡಿದ ಸರ್ಕಾರಕ್ಕೆ ಧಿಕ್ಕಾರ”, “ಬಜೆಟ್ ಅಂದರೆ ಬಜೆಟ್ ಅಲ್ಲ, ಖಾಲಿ ಚೊಂಬಿನ ಬಜೆಟ್” ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ರಾಜ್ಯದ ಜನತೆ ಹಾಗೂ ರೈತರಿಗೆ ಖಾಲಿ ಚೊಂಬು ನೀಡಿದ ಸರ್ಕಾರ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.

ಮಹಿಳಾ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ: 90 ದಿನಗಳ ಮಾತೃತ್ವ ರಜೆ ಘೋಷಣೆ

ಬೆಂಗಳೂರು: ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಈ ಘೋಷಣೆ ಮಾಡಿರುವ ಸಿಎಂ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಸೌಲಭ್ಯ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಉನ್ನತ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೆರವಿನಡಿ 40 ಸರ್ಕಾರಿ ಪದವಿ ಕಾಲೇಜುಗಳು ಹಾಗೂ 11 ಪಾಲಿಟೆಕ್ನಿಕ್ ಸಂಸ್ಥೆಗಳ ಅಭಿವೃದ್ಧಿ ಕೈಗೊಳ್ಳಲಾಗುವುದು. ಜೊತೆಗೆ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಉತ್ತೇಜಿಸಲು 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆಯನ್ನು ನೀಗಿಸಲು 1000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ವಿದ್ಯಾರ್ಥಿನಿಯರು ಹೆಚ್ಚಿರುವ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲು 31 ಕೋಟಿ ರೂ. ವೆಚ್ಚ ಮಾಡಲಾಗುವುದು.

ಇದಲ್ಲದೆ, 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಪದವಿ ಕಾಲೇಜುಗಳನ್ನು ಉನ್ನತೀಕರಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಾವಣಗೆರೆ ದಕ್ಷಿಣಕ್ಕೆ ಸರ್ಕಾರದ ಗಿಫ್ಟ್: ಬಜೆಟ್ʼನಲ್ಲಿ 100 ಕೋಟಿ ರೂ. ಬಂಪರ್ ಅನುದಾನ!

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಬಂಪರ್ ಅನುದಾನ ಘೋಷಿಸಲಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿಡಲಾಗಿದೆ.

ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿವೆ. ಈ ನಡುವೆ ಬಿಜೆಪಿಯೊಳಗಿನ ಬಣಬೇಧವೂ ಆರಂಭವಾಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಇಂತಹ ರಾಜಕೀಯ ಪರಿಸ್ಥಿತಿಯ ನಡುವೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಚುನಾವಣಾ ರಾಜಕೀಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಫಲಿತಾಂಶದ ನಂತರವೇ ಸ್ಪಷ್ಟವಾಗಲಿದೆ.

ಕಾಂಗ್ರೆಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಖಾಲಿಯಾಗಿದ್ದು, ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದುವರೆಗೆ ಬಿಜೆಪಿ ಗೆಲುವು ಸಾಧಿಸಿಲ್ಲ. ಬಹುಪಾಲು ಸಮಯ ಈ ಕ್ಷೇತ್ರವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದರು.

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ರೋಗ ನಿಯಂತ್ರಣಕ್ಕೆ 10 ಕೋಟಿ ರೂ. ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಘೋಷಣೆ ಮಾಡಲಾಗಿದೆ. ಅಡಿಕೆ ಬೆಳೆಗೆ ಹಾನಿ ಉಂಟುಮಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳನ್ನು ನಿಯಂತ್ರಿಸಲು ಅಧ್ಯಯನ ಮತ್ತು ಸಂಶೋಧನಾ ಚಟುವಟಿಕೆಗಳಿಗೆ 10 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಬಜೆಟ್ ಭಾಷಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಡಿಕೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವಿವಿಧ ರೋಗಗಳು ಹಾಗೂ ತೆಂಗು ಬೆಳೆಗೆ ತೊಂದರೆ ಉಂಟುಮಾಡುತ್ತಿರುವ ಕಪ್ಪು ತಲೆ ಹುಳು ಮತ್ತು ಬಿಳಿ ನೊಣಗಳನ್ನು ನಿಯಂತ್ರಿಸಲು ಸಮುದಾಯ ಆಧಾರಿತ ರೋಗಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಯೋಜನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತದೆ. ಇದರ ಮೂಲಕ ರೈತರಿಗೆ ತಾಂತ್ರಿಕ ನೆರವು ಹಾಗೂ ವೈಜ್ಞಾನಿಕ ಮಾರ್ಗದರ್ಶನ ಒದಗಿಸಿ ಬೆಳೆ ಹಾನಿಯನ್ನು ಕಡಿಮೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಸಿಎಂ ತಿಳಿಸಿದ್ದಾರೆ.

Karnataka Budget: 5 ಕೆಜಿ ಅಕ್ಕಿ ಬದಲು “ಇಂದಿರಾ ಆಹಾರ ಕಿಟ್” ವಿತರಣೆ: ಬಜೆಟ್‌ʼನಲ್ಲಿ ಸಿಎಂ ಘೋಷಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ರಾಜ್ಯದ ಬಡವರ ಹಸಿವು ನೀಗಿಸುವ ಉದ್ದೇಶದಿಂದ 4.54 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ಕಳೆದ ಮೂರು ವರ್ಷಗಳಿಂದ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆಗಾಗಿ ಸರ್ಕಾರ ಈಗಾಗಲೇ 17,167 ಕೋಟಿ ರೂ. ವೆಚ್ಚ ಮಾಡಿದೆ ಎಂದು ಹೇಳಿದರು.

ಇದೀಗ ಹೆಚ್ಚುವರಿ ಅಕ್ಕಿಯ ಬದಲಾಗಿ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥಗಳನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್’ ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗಾಗಿ ಪ್ರಸ್ತುತ ಸಾಲಿನಲ್ಲಿ 6,200 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಿಎಂ ತಿಳಿಸಿದರು.

ಇದಲ್ಲದೆ, ಆಹಾರ ಧಾನ್ಯಗಳ ವಿತರಣೆಗಾಗಿ ನೀಡುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವಾಗದಂತೆ FIST Application ಮೂಲಕ ನೇರವಾಗಿ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ದಾಸೋಹ ಯೋಜನೆಯಡಿ ಈಗಾಗಲೇ ರಾಜ್ಯದ 274 ಕಲ್ಯಾಣ ಸಂಸ್ಥೆಗಳ 32,059 ಫಲಾನುಭವಿಗಳಿಗೆ 14 ಕೋಟಿ ರೂ. ವೆಚ್ಚದಲ್ಲಿ ಆಹಾರ ಭದ್ರತೆ ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ, ಈ ವರ್ಷ 34 ಹೊಸ ಕಲ್ಯಾಣ ಸಂಸ್ಥೆಗಳ 6,701 ಫಲಾನುಭವಿಗಳಿಗೆ ಕೂಡ ಆಹಾರ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಾಲು ತಾಕಿದ ವಿಚಾರಕ್ಕೆ ಜಗಳ: ಯುವಕನಿಗೆ ಚಾಕುವಿನಿಂದ ಇರಿದು ಕೊಲೆ! ಆರೋಪಿಗಳು ಅರೆಸ್ಟ್

0

ಬೆಂಗಳೂರು: ಬಸವೇಶ್ವರನಗರದ ಹೋಟೆಲ್‌ನಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಬಸವೇಶ್ವರ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಜುನಾಥ್ ಹಾಗೂ ಭಾಗ್ಯರಾಜ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಸೇರಿ ಶಶಿಕುಮಾರ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಮಾರ್ಚ್ 2ರ ರಾತ್ರಿ ಹೋಟೆಲ್‌ನಲ್ಲಿ ಶಶಿಕುಮಾರ್ ಹಾಗೂ ಮಂಜುನಾಥ್ ನಡುವೆ ಕಾಲು ತಾಕಿದ ವಿಚಾರಕ್ಕೆ ಜಗಳ ಉಂಟಾಗಿದೆ. ಈ ವೇಳೆ ಕೋಪಗೊಂಡ ಮಂಜುನಾಥ್ ತನ್ನ ಮನೆಯಿಂದ ತಮ್ಮ ಭಾಗ್ಯರಾಜ್ ಅನ್ನು ಕರೆಸಿಕೊಂಡಿದ್ದಾನೆ.

ಘಟನೆ ಸ್ಥಳಕ್ಕೆ ಬಂದ ಭಾಗ್ಯರಾಜ್ ಕೋಪದಲ್ಲಿ ಚಾಕು ಹಿಡಿದು ಬಂದು, ಏಕಾಏಕಿ ಶಶಿಕುಮಾರ್ ಕತ್ತಿಗೆ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಗಂಭೀರ ಗಾಯಗೊಂಡ ಶಶಿಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

Karnataka Budget: ಇನ್ಮುಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ “ಶಾಂತವೇರಿ ಗೋಪಾಲಗೌಡ” ಆಸ್ಪತ್ರೆ !

ಬೆಂಗಳೂರು: 2026ರ ಬಜೆಟ್‌ನಲ್ಲಿ ಕರ್ನಾಟಕದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬೆಂಗಳೂರಿನ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಗೆ ಇನ್ನು ಮುಂದೆ “ಶಾಂತವೇರಿ ಗೋಪಾಲಗೌಡ ಆಸ್ಪತ್ರೆ” ಎಂದು ಮರುನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆ ಸುಮಾರು 125 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಬೆಂಗಳೂರಿನ ಹೃದಯಭಾಗದಲ್ಲಿ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

1897ರಲ್ಲಿ ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ವಜ್ರಮಹೋತ್ಸವದ ನೆನಪಿಗಾಗಿ ಈ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ಮೈಸೂರು ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರು ನೆರವೇರಿಸಿದ್ದರು.

1898ರಲ್ಲಿ ಬೆಂಗಳೂರಿನಲ್ಲಿ ಉಂಟಾದ ಭೀಕರ ಪ್ಲೇಗ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ತುರ್ತಾಗಿ ಸಿದ್ಧಪಡಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಬಳಿಕ 1900ರ ಡಿಸೆಂಬರ್ 8ರಂದು ವೈಸರಾಯ್ ಲಾರ್ಡ್ ಕರ್ಜನ್ ಅವರಿಂದ ಆಸ್ಪತ್ರೆ ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು.

ಆರಂಭದಲ್ಲಿ 140 ಹಾಸಿಗೆಗಳಿಂದ ಪ್ರಾರಂಭವಾದ ಈ ಆಸ್ಪತ್ರೆ ಈಗ ಸಾವಿರಕ್ಕೂ ಹೆಚ್ಚು ಹಾಸಿಗೆಗಳೊಂದಿಗೆ ದೊಡ್ಡ ಆರೋಗ್ಯ ಸಂಸ್ಥೆಯಾಗಿ ಬೆಳೆದಿದೆ. ಕೋವಿಡ್-19 ಸೇರಿದಂತೆ ಅನೇಕ ತುರ್ತು ಸಂದರ್ಭಗಳಲ್ಲಿ ಸಾವಿರಾರು ಜನರ ಜೀವ ಉಳಿಸುವಲ್ಲಿ ಈ ಆಸ್ಪತ್ರೆ ಪ್ರಮುಖ ಪಾತ್ರ ವಹಿಸಿದೆ.

ಇದೀಗ ರಾಜ್ಯದ ಗೌರವಾನ್ವಿತ ನಾಯಕ ಶಾಂತವೇರಿ ಗೋಪಾಲಗೌಡ ಅವರ ಸ್ಮರಣಾರ್ಥವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಹೊಸ ಹೆಸರು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದರ ಜೊತೆಗೆ ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಘೋಷಿಸಿದೆ. ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತದೆ. ಜೊತೆಗೆ ಹೊಸದುರ್ಗ–ಟಿ.ಬಿ ಡ್ಯಾಂ ಸಮೀಪ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ಈ ಯೋಜನೆಗಳು ರಾಜ್ಯದಾದ್ಯಂತ ಆರೋಗ್ಯ ಸೇವೆಗಳ ಪ್ರವೇಶ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.