ಕೊಲಂಬೋ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾಗೆ ಬಂದಿದ್ದ ಪಾಕಿಸ್ತಾನ ತಂಡದ ಆಟಗಾರನೊಬ್ಬ ಕ್ಯಾಂಡಿಯ ಹೋಟೆಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಸೂಪರ್–8 ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿ ಸಹಾಯಕ್ಕಾಗಿ ಕೂಗಿದಾಗ ಹೋಟೆಲ್ ಸಿಬ್ಬಂದಿ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಈ ವಿಷಯವನ್ನು ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಅವರಿಗೆ ತಿಳಿಸಿದ್ದಾರೆ.
ಕ್ಯಾಂಡಿಯ ಗೋಲ್ಡನ್ ಕ್ರೌನ್ ಹೋಟೆಲಿನ ಆಡಳಿತ ಮಂಡಳಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಆಟಗಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಆಟಗಾರನ ಪರವಾಗಿ ತಂಡದ ವ್ಯವಸ್ಥಾಪಕ ನವೈದ್ ಚೀಮಾ ಕ್ಷಮೆಯಾಚಿಸಿದ್ದು, ಅನುಚಿತ ವರ್ತನೆ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5 ರನ್‌ಗಳಿಂದ ಗೆಲುವು ಸಾಧಿಸಿದ್ದರೂ, ನೆಟ್ ರನ್ ರೇಟ್ ಕಡಿಮೆ ಇದ್ದ ಕಾರಣ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ತಂಡ ಭಾನುವಾರ ಮತ್ತು ಸೋಮವಾರ ಪಾಕಿಸ್ತಾನಕ್ಕೆ ಮರಳಿದೆ.
ಘಟನೆಯ ಹಿನ್ನೆಲೆ ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆಯಿದ್ದು, ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಪಾಕಿಸ್ತಾನಿ ಆಟಗಾರರ ಪ್ರವಾಸದ ವೇಳೆ ಅಸಭ್ಯ ವರ್ತನೆ ಆರೋಪಗಳು ಕೇಳಿಬರುವುದು ಹೊಸದಲ್ಲ.
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ವೇಳೆ ಯುವ ಬ್ಯಾಟರ್ ಹೈದರ್ ಅಲಿ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದರು. ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದಕ್ಕೂ ಮೊದಲು ಮಲೇಷ್ಯಾ ಪ್ರವಾಸದ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ತಂಡದ ಮಸಾಜ್ ತಜ್ಞ ಮಲಾಂಗ್ ಅಲಿ ವಿರುದ್ಧವೂ ದೂರು ದಾಖಲಾಗಿದ್ದು, ಅವರಿಗೆ ದಂಡ ವಿಧಿಸಲಾಗಿತ್ತು.



