ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀಲಂಕಾದಲ್ಲಿ ಆಯೋಜಿಸಲಾಗಿದ್ದ 1ನೇ ಸೌತ್ ಏಷ್ಯಾ ಪ್ಯಾರಾ ಸಿಟಿಂಗ್ ಥ್ರೋಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯಿಂದ ಮಾಲತಿ ಇನಾಮತಿ ಕ್ಯಾಪ್ಟನ್‌ಶಿಪ್ ಅಡಿಯಲ್ಲಿ ಮಹಿಳೆಯರಿಗೆ ಚಿನ್ನ, ಗದಗ ಪುರುಷರ ವಿಭಾಗದ ಮಹಾಂತೇಶ ಹಾಗೂ ಆನಂದ ತಂಡ ಶ್ರೇಷ್ಠ ಪ್ರದರ್ಶನ ಮಾಡುವ ಮೂಲಕ ಬೆಳ್ಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವರ್ಲ್ಡ್ ಪ್ಯಾರಾ ಥ್ರೋಬಾಲ್ ಫೆಡರೇಷನ್, ಏಷಿಯನ್ ಪ್ಯಾರಾ ಥ್ರೋಬಾಲ್ ಫೆಡರೇಷನ್ ಮತ್ತು ಶ್ರೀಲಂಕಾ ಪ್ಯಾರಾ ಥ್ರೋಬಾಲ್ ಫೆಡರೇಷನ್ ವತಿಯಿಂದ ಫಾದರ್ ಆಫ್ ಥ್ರೋಬಾಲ್ ಆಲ್ಬರ್ಟ್ ಪ್ರೇಮ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸಬರಗಮುವಾ ಗವರ್ನರ್ ಚಂಪಾ ಜನಕೀ ರಾಜರತ್ನ, ಶ್ರೀಲಂಕಾ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷ ಬ್ರಿಗೇಡಿಯರ್ ದಾನಂಜಯ ಅಲುಡೆನಿಯ, ವರ್ಲ್ಡ್ ಪ್ಯಾರಾ ಥ್ರೋಬಾಲ್ ಫೆಡರೇಷನ್ ಅಧ್ಯಕ್ಷೆ ನಿರ್ಮಲಾ ರಾವತ್ ಮತ್ತಿತರಿದ್ದರು.
ಮಹಿಳೆಯರ ವಿಭಾಗ: ಮಾಲತಿ ಇನಾಮತಿ ಕ್ಯಾಪ್ಟನ್‌ಶಿಪ್ ಅಡಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿತು. ಭಾರತ–ನೇಪಾಳ 2–0 ಗೆಲುವಿನಿಂದ ಆರಂಭಿಸಿತು. ಫೈನಲ್ ಪಂದ್ಯವು 3 ಸೀರಿಸ್ ಪಂದ್ಯಗಳ ರೂಪದಲ್ಲಿ ನಡೆಯಿತು (ಪ್ರತಿ ಸೀರಿಸ್ 3 ಪಂದ್ಯಗಳು, ಪ್ರತಿ ಪಂದ್ಯ 21 ಪಾಯಿಂಟ್‌ಗಳು), ಭಾರತ ತಂಡ ಶ್ರೀಲಂಕಾವನ್ನು 2–0 ಅಂತರದಲ್ಲಿ ಸೋಲಿಸಿ ಚಿನ್ನದ ಪದಕ ಹಾಗೂ 1ನೇ ಮಹಿಳಾ ಸೌತ್ ಏಷ್ಯಾ ಪ್ರಶಸ್ತಿಯನ್ನು ಗೆದ್ದಿತು.
ಪುರುಷರ ವಿಭಾಗ: ಪುರುಷರ ತಂಡ ಶ್ರೇಷ್ಠ ಪ್ರದರ್ಶನ ನೀಡಿದರೂ, ಫೈನಲ್ ಪಂದ್ಯ ಕೂಡ 3 ಸೀರಿಸ್ ಆಧಾರಿತವಾಗಿದ್ದು, ಆತಿಥೇಯ ಶ್ರೀಲಂಕಾ ತಂಡ 2–1 ಅಂತರದಲ್ಲಿ ಜಯ ಸಾಧಿಸಿತು. ಭಾರತದ ಪುರುಷರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು ಎಂದು ಅಥ್ಲೆಟಿಕ್ ಕೋಚ್ ರಿಚರ್ಡ್ ಧರ್ಮದಾಸ್, ಟ್ರೈನರ್, ರಿಯಾಜ್ ಬಾನಿ ತಿಳಿಸಿದ್ದಾರೆ.



