ವಿಜಯಸಾಕ್ಷಿ ಸುದ್ದಿ, ಗದಗ: ದಲಿತ, ದಮನಿತ ಸಮುದಾಯಗಳ ಪಾಲಿಗೆ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನ ವಿಮೋಚನಾ ದಿನವಾಗಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ರಾಜ್ಯ ಸಂಚಾಲಕರಾದ ಆಯುಷ್ಮಾನ್ ಮಾವಳ್ಳಿ ಶಂಕರವರ ನಾಯಕತ್ವದಲ್ಲಿ ಪ್ರೊ. ಬಿ. ಕೃಷ್ಣಪ್ಪನವರ 88ನೇ ಜನ್ಮದಿನದ ನೆನಪಿನಲ್ಲಿ ನಾಗರಿಕ ಹಕ್ಕು ರಕ್ಷಣಾ ದಿನಾಚರಣೆಯನ್ನು ಜೂನ್ 9ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣ ಮೈಸೂರು ಬ್ಯಾಂಕ್ ಸರ್ಕಲ್ ಸಮೀಪ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಗದಗ ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಸ್ಪçಶ್ಯತೆ ನಿವಾರಣೆಗಾಗಿ ದಲಿತ ಸಂಘರ್ಷ ಸಮಿತಿ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಕೋಟ್ಯಾಂತರ ಕಾರ್ಯಕರ್ತರೊಂದಿಗೆ ಅಸ್ಪಶ್ಯತೆ ನಿವಾರಣೆಗೆ ಕಾರಣರಾಗಿದ್ದಾರೆ. ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಮುತ್ತಪ್ಪ ಭಜಂತ್ರಿ, ಹೊನ್ನಪ್ಪ ಸಾಕಿಯವರು ಪ್ರೊ. ಬಿ. ಕೃಷ್ಣಪ್ಪರವರ ಸಾಧನೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಗದಗ ಜಿಲ್ಲಾ ಒಕ್ಕೂಟದ ಸಂಚಾಲಕ ನಾಗರಾಜ ಗೋಕಾವಿ, ರೋಣ ಸಂಚಾಲಕ ಹನಮಂತ ಚಲವಾದಿ, ಗಜೇಂದ್ರಗಡ ಸಂಚಾಲಕ ಮಹೇಶ ಮಾದರ, ಜಿಲ್ಲಾ ಸಂಘಟನಾ ಸಂಚಾಲಕ ಮುತ್ತಪ್ಪ ಭಜಂತ್ರಿ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ಹೊನ್ನಪ್ಪ ಸಾಕಿ, ಮರಿಯಪ್ಪ ನಡಗೇರಿ, ಮಹಾಂತೇಶ ನಡಗೇರಿ, ಶ್ರೀಧರ ಕಲಾಲ, ಚಂದ್ರು ಡಿ.ಕೆ., ಬಸವರಾಜ ಕಾಳೆ, ಕಳಕಪ್ಪ ಪೋತದಾರ, ಪ್ರವೀಣ ಮಾನಳ್ಳಿ, ಲಕ್ಷ್ಮಣ ವಡ್ಡರಕಲ್ಲ, ಹನಮಂತ ಕಿರಟಗೇರಿ, ಅರುಣ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ರೋಣ ತಾಲೂಕು ಸಂಚಾಲಕರಾದ ಹನಮಂತ ಚಲವಾದಿ ಮಾತನಾಡಿ, 70ರ ದಶಕದ ಹೊತ್ತಿಗೆ ವಿದ್ಯಾವಂತ ಮೊದಲ ದಲಿತ ತಲೆಮಾರು ಕರ್ನಾಟಕದಲ್ಲಿ ಹುಟ್ಟಿ ದಲಿತ ಸಮುದಾಯಗಳ ಮೇಲೆ ಜಾತಿಯ ಕಾರಣಕ್ಕೆ ಆಗುತ್ತಿದ್ದ ಶೋಷಣೆ, ಹಿಂಸೆ, ದೌರ್ಜನ್ಯಗಳ ವಿರುದ್ಧ ಮಾತನಾಡಲು ತೊಡಗಿತ್ತು. ಲೋಹಿಯಾ ಸಮಾಜವಾದಿ ಚಳುವಳಿ ಎತ್ತುತ್ತಿದ್ದ ಜಾತಿ ವಿನಾಶದ ಪ್ರಶ್ನೆಯಿಂದ ಆಕರ್ಷಿತರಾಗಿ ಸಮಾಜವಾದಿ ಚಳುವಳಿಗೆ ಸೇರಿದ ಮೊದಲ ತಲೆಮಾರಿನ ದಲಿತ ಹೋರಾಟಗಾರರಲ್ಲಿ ಪ್ರೊ. ಬಿ. ಕೃಷ್ಣಪ್ಪ ಪ್ರಮುಖರು ಎಂದು ಹೇಳಿದರು.



