ವಿಜಯಸಾಕ್ಷಿ ಸುದ್ದಿ, ಗದಗ : ಸಂಗೀತ, ನಾಟ್ಯ, ಕಲೆಯಂತಹ ಸಾಂಸ್ಕೃತಿಕ ಹವ್ಯಾಸವುಳ್ಳವರು ಅತ್ಯುತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಮಾನವೀಯ ಪ್ರೀತಿ ಸಹಜವಾಗಿ ಅವರಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ಕಾರ್ಯವನ್ನು ಶ್ರೀ ರಾಜೇರ್ಶವರಿ ಕಲಾ ಕುಟೀರ 23 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ಶ್ರೀ ರಾಜೇಶ್ವರಿ ಕಲಾ ಕುಟೀರದ 23ನೇ ವರ್ಷದ ವಾರ್ಷಿಕೋತ್ಸವ ಮತ್ತು ಸಂಗೀತ ನೃತ್ಯೋಲ್ಲಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ ಓದು, ಬರಹ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಪಾಲಕರು ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿ.ಬಿ. ಪಾಟೀಲ ಮಾತನಾಡಿ, ಶ್ರೀ ರಾಜೇಶ್ವರಿ ಕಲಾ ಕುಟೀರದ ಸಾಧನೆಗಳನ್ನು ಹಾಗೂ ಲಿಂಗೈಕ್ಯ ಪೂಜ್ಯ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದದಿಂದ ಬೆಳೆಯುತ್ತಿರುವ ಶ್ರೀ ರಾಜೇಶ್ವರಿ ಕಲಾ ಕುಟೀರದ ಸಾಧನೆಗಳನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ತಬಲಾ ವಾದಕ ನಾಗಲಿಂಗ ಮೂರಗೆ, ಸಾಹಿತ್ಯ ವಿದ್ವಾಂಸ ವಾಸುದೇವ ಹುಲಿ, ಜಾನಪದ ಕಲಾವಿದ ಸಾವಿತ್ರಿ ಲಂಬಾಣಿಯವರನ್ನು ಸನ್ಮಾನಿಸಲಾಯಿತು.
ಅಂದಾನಪ್ಪ ವಿಭೂತಿ ಸ್ವಾಗತಿಸಿ ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷ ಗಜಾನನ ವೆರ್ಣೇಕರ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ಸ್ಮರಿಸಿದರು. ಕಲಾ ಕುಟೀರದ 150ಕ್ಕೂ ಹೆಚ್ಚು ಮಕ್ಕಳ ಸಂಗೀತ, ನೃತ್ಯಗಳು ಕಲಾಪ್ರಿಯರ ಮನಸ್ಸನ್ನು ಸೆಳೆದವು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಸ್.ಎಸ್. ಕಳಸಾಪುರಶೆಟ್ಟರ ಉಪಸ್ಥಿತರಿದ್ದರು. ನೃತ್ಯ ನಿರ್ದೇಶನವನ್ನು ಮಾಲಾ ತಂಬ್ರಳ್ಳಿ ಮಾಡಿದರು. ಜ್ಯೋತಿ ಹೇರಲಗಿ ನಿರೂಪಿಸಿದರು. ಪೂಜಾ ವೆರ್ಣೇಕರ ವಂದಿಸಿದರು.



