ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ವಂತ ಸೂರು ಪ್ರತಿಯೊಬ್ಬರ ಬದುಕಿನ ಮೊದಲ ಆದ್ಯತೆ ಮತ್ತು ಅಗತ್ಯತೆಯೂ ಹೌದು. ಆದರೆ, ಲಕ್ಷ್ಮೇಶ್ವರದಲ್ಲಿ ದಶಕಗಳಿಂದ ನಿವೇಶನ ಹಂಚಿಕೆಗೆ ಗ್ರಹಣ ಹಿಡಿದಿದ್ದು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಬಡವರ, ನಿರ್ಗತಿಕರ, ಗುಡಿಸಲುವಾಸಿಗಳ ಸ್ವಂತ ಸೂರಿನ ಕನಸು ಗಗನ ಕುಸುಮವಾಗಿಯೇ ಉಳಿದಿದೆ. ಸರ್ಕಾರಗಳೇನೂ ಗುಡಿಸಲು ಮುಕ್ತ ಸಮಾಜಕ್ಕಾಗಿ ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸುತ್ತವೆ. ಆದರೆ ಜನಪ್ರತಿನಿಧಿಗಳ ಹಗ್ಗ ಜಗ್ಗಾಟ, ಇಚ್ಛಾಶಕ್ತಿಯ ಕೊರತೆ ಹಾಗೂ ಬೇಜವಾಬ್ದಾರಿತನದಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಲಕ್ಷ್ಮೇಶ್ವರದಲ್ಲಿ ಆಶ್ರಯ ಯೋಜನೆ ನೆನೆಗುದಿಗೆ ಬಿದ್ದಿರುವುದೇ ಇದಕ್ಕೆ ಸಾಕ್ಷಿ.
2014ರಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅವಧಿಯಲ್ಲಿ ಆಶ್ರಯ ಯೋಜನೆಯಡಿಯಲ್ಲಿ ನಿವೇಶನ ನೀಡುವ ಉದೇಶದಿಂದ 16 ಎಕರೆ 16 ಗುಂಟೆ ಜಾಗದಲ್ಲಿ 648 ನಿವೇಶನಗಳನ್ನು ಗುರುತಿಸಲಾಗಿತ್ತು. ಪಟ್ಟಣದಲ್ಲಿ 2018ರಲ್ಲಿ 438 ನಿವೇಶನ ರಹಿತರಿಗೆ ತಮ್ಮ-ತಿಮ್ಮಿ ಗುಡ್ಡದಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆ ಅಡಿಯಲ್ಲಿ, ನಿವೇಶನದ ಹಕ್ಕುಪತ್ರ ವಿತರಣೆ ಮಾಡಿದ್ದರು. 210 ನಿವೇಶನಗಳಿಗೆ ಇನ್ನೂ ಫಲಾನುಭವಿಗಳ ಆಯ್ಕೆ ಆಗಬೇಕಾಗಿದೆ. ಆದರೆ ಹಕ್ಕುಪತ್ರ ಪಡೆದ ಫಲಾನುಭವಿಗಳು ತಮ್ಮ ನಿವೇಶನವಿರುವ ಪ್ರದೇಶವನ್ನು ಇದುವರೆಗೂ ನೋಡಿಲ್ಲ. ಹೋಗಲು ದಾರಿಯಿಲ್ಲದಂತಹ ನಿರ್ಜನ ಕಾಡು ಪ್ರದೇಶ ಇದಾಗಿದೆ. ಇದೀಗ ಅಲ್ಲಿ ಅಭಿವೃದ್ಧಿ ಕಾರ್ಯ ನಡೆದಿದ್ದು, ನಿವೇಶನ ಹಂಚಿಕೆ ಕಾಲ ಸನ್ನಿಹಿತವಾಗಿದೇಯೇ, ಫಲಾನುಭವಿಗಳ ಕನಸು ನನಸಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
438 ನಿವೇಶನಗಳ ಹಕ್ಕುಪತ್ರ ಹಿಡಿದು ನಮ್ಮ ನಿವೇಶನ ಗುರುತಿಸಿಕೊಡಿ, ಅಲ್ಲಿ ಸೌಲಭ್ಯ ಕಲ್ಪಿಸಿ ಎಂದು ಕಳೆದ 6-7 ವರ್ಷಗಳಿಂದ ನಿತ್ಯ ಪುರಸಭೆಗೆ ಅಲೆದಾಡಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಬದುಕಲಾದರೂ ಅವಕಾಶ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ.
– ಕವಿತಾ ಪಾಟೀಲ, ಪಲ್ಲವಿ ಹಿರೇಮಠ.
ಆಶ್ರಯ ಮನೆ ಫಲಾನುಭವಿಗಳು.
ಸದ್ಯದಲ್ಲಿಯೇ ಆಶ್ರಯ ಸಮಿತಿ ಸಭೆ ಕರೆದು ಆಶ್ರಯ ಫಲಾನುಭವಿಗಳ ಆಯ್ಕೆ ಪಟ್ಟಿ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ಈಗಾಗಲೇ ತಮ್ಮಾತಿಮ್ಮಿ ಗುಡ್ಡದ ನಿವೇಶನದಲ್ಲಿ ನಿವೇಶನ ಅಳತೆ, ಹದ್ದುಬಸ್ತ್ ಮಾಡಲಾಗಿದೆ. ರಸ್ತೆ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಹಕ್ಕುಪತ್ರ ಪಡೆದ ಫಲಾನುಭವಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.
– ಡಾ. ಚಂದ್ರು ಲಮಾಣಿ.
ಶಾಸಕರು.
ಯಲ್ಲವ್ವ ದುರಗಣ್ಣವರ.
ಪುರಸಭೆ ಅಧ್ಯಕ್ಷೆ.
“ತಮ್ಮ-ತಿಮ್ಮಿ ಗುಡ್ಡದ 16 ಎಕರೆ ಆಶ್ರಯ ನಿವೇಶನದ ಜಮೀನಿಗೆ ದಾರಿಯೇ ಇಲ್ಲ. ದಾರಿಯೇ ಇಲ್ಲದ ನಿವೇಶನದಲ್ಲಿ ಆಶ್ರಯ ಪ್ಲಾಟ್ ಹಂಚಿದರೆ ಹೋಗುವುದು ಹೇಗೆ? ಆದ್ದರಿಂದ ರಸ್ತೆಗಾಗಿ ಜಮೀನು ಮಾರಾಟ ಮಾಡಲು ಒಪ್ಪಿರುವ ಜಮೀನು ಮಾಲಿಕರಿಂದ ಖರೀದಿ ಪ್ರಕ್ರಿಯೆ ನಡೆಸಬೇಕು”
– ಪ್ರವೀಣ ಬಾಳಿಕಾಯಿ.
ಪುರಸಭೆ ಸದಸ್ಯ.



