HomeGadag Newsಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ

ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲೆಯ ಎರಡು ಪ್ರಮುಖ ಹಳ್ಳಗಳಾದ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆ ಸಿದ್ಧಗೊಳಿಸಿದ್ದು, ಶಾಶ್ವತ ಪರಿಹಾರ ಕ್ರಮಕೈಗೊಳ್ಳಲು ಆರಂಭಿಕವಾಗಿ ರೂ. 200 ಕೋಟಿ ಹಣ ಸರ್ಕಾರದಿಂದ ಈಗಾಗಲೇ ಬಿಡುಗಡೆ ಆಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.

ಅವರು ಬುಧವಾರ ಮಧ್ಯಾಹ್ನ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಸೇತುವೆ ಹತ್ತಿರ ಬೆಣ್ಣೆಹಳ್ಳದ ನಾಲೆಯನ್ನು ವೀಕ್ಷಿಸಿ ಮಾತನಾಡಿದರು.

ಬೆಣ್ಣೆಹಳ್ಳದಿಂದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ 6 ತಾಲೂಕುಗಳ 56 ಹಳ್ಳಿಗಳು ಬಾಧಿತವಾಗುತ್ತವೆ. ಬೆಣ್ಣೆಹಳ್ಳವು ಈ ಮೂರು ಜಿಲ್ಲೆಗಳ 148 ಕಿ.ಮೀ ಉದ್ದದಲ್ಲಿ ಹರಿಯುತ್ತದೆ. ಇದು ಸುಮಾರು 4800 ಚದರ ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ. 2012ರಲ್ಲಿ ನೀರಾವರಿ ತಜ್ಞ ಡಾ. ಜಿ.ಎಸ್. ಪರಮಶಿವಯ್ಯ ಅವರು ತುಪ್ಪರಿಹಳ್ಳ ಮತ್ತು ಬೆಣ್ಣೆಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆ ಕುರಿತು ನೀಡಿದ ಅಧ್ಯಯನ ವರದಿಯನ್ನು ಸರಕಾರ ಪರಿಶೀಲಿಸಿದೆ. ಅದರ ಆಧಾರದ ಮೇಲೆ ನೀರಾವರಿ ನಿಗಮದ ವರದಿ ಪಡೆದು ಅನುಷ್ಠಾನಗೊಳಿಸುತ್ತದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಶಾಸಕ ಎನ್.ಎಚ್. ಕೋನರಡ್ಡಿ ಅವರ ನಿರಂತರ ಪ್ರಯತ್ನ ಹಾಗೂ ಒತ್ತಾಯದ ಫಲವಾಗಿ ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯದಲ್ಲಿ ರೂ. 200 ಕೋಟಿಗಳ ಅನುದಾನ ನೀಡಿ, ಹಣ ಬಿಡುಗಡೆ ಮಾಡಿದ್ದಾರೆ. ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಅಂತಿಮ ಹಂತದಲ್ಲಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯಲ್ಲಿರುವ ಉಸ್ತುವಾರಿ ಸಚಿವರು ಮತ್ತು ಶಾಸಕರು, ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಪ್ರವಾಹ ಪೀಡಿತ ಪ್ರದೇಶಗಳನ್ನು ಮತ್ತು ಹಳ್ಳಗಳನ್ನು ಪರೀಕ್ಷಿಸಿ, ವರದಿ ಸಲ್ಲಿಸಬೇಕೆಂದು ಹೇಳಿದ್ದಾರೆ. ಅದರಂತೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದ ಪ್ರವಾಹ ಪೀಡಿತವಾಗಬಹುದಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದಾರೆ. ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪ್ರವಾಹ ಪೀಡತ ಪ್ರದೇಶಗಳನ್ನು ತೋರಿಸಿ, ವಿವರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಧಿಕವಾಗಿರುವದರಿಂದ ಜಿಲ್ಲೆಯ ಬಹುತೇಕ ಭಾಗದಲ್ಲಿ ಬಿತ್ತನೆ ಆರಂಭವಾಗಿರುವುದಿಲ್ಲ. ರೈತರಿಗೆ ಅಗತ್ಯವಿರುವ ಬೀಜ, ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಎಮ್.ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿ.ಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಬೃಹತ್ ನೀರಾವರಿ ಇಲಾಖೆಯ ಎಇಇ ರವೀಂದ್ರ ಜಾಲಗಾರ, ನವಲಗುಂದ ತಹಸೀಲ್ದಾರ ಸುಧೀರ ಸಾವುಕಾರ, ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಅಗ್ನಿಶಾಮಕ ದಳದ ಅಧಿಕಾರಿ ಅಮೃತ ಮತ್ತು ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ನವಲಗುಂದ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಪತ್ತು ನಿರ್ವಹಣೆಗೆ ಅಗತ್ಯ ನೆರವು

ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ಉಂಟಾಗುವ ಹಳ್ಳಗಳ ಪ್ರವಾಹ, ಅತಿವೃಷ್ಟಿ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಿ, ಯಾವುದೇ ಜನ-ಜಾನುವಾರು ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ಸಭೆ ಜರುಗಿಸಿ, ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕೇಂದ್ರ ಸ್ಥಾನ ಬಿಡದಂತೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಕಾಳಜಿ ತೋರದಂತೆ ನಿರ್ದೇಶಿಸಿ, ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!