ಮೈಸೂರು: ಹುಣಸೂರು ತಾಲೂಕಿನ ಕಿರುಮುದ್ದನಹಳ್ಳಿ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಬಿಳಿಕೆರೆ ಪೊಲೀಸರು ಯಶಸ್ವಿಯಾಗಿ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ದರೋಡೆ ಯೋಜನೆ ಮಂಡ್ಯದ ಸೆಂಟ್ರಲ್ ಜೈಲಿನಲ್ಲಿ ರೂಪುಗೊಂಡಿತ್ತು ಎಂಬ ಸಂಗತಿ ಬಹಿರಂಗವಾಗಿದೆ.
ಫೆಬ್ರವರಿ 12ರಂದು ರಾತ್ರಿ ವೇಳೆ ಹಳೆಯ ಮಾದರಿಯ ಸ್ಕೋಡಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಚ್ಚು ಮತ್ತು ಡ್ರಾಗರ್ ತೋರಿಸಿ ಸಿಬ್ಬಂದಿ ಅಜಯ್ ಕುಮಾರ್ ಹಾಗೂ ದಿನೇಶ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಂಡ್ಯ ಮೂಲದ ಲಕ್ಷ್ಮಣ್ ಸೇರಿದಂತೆ ಚನ್ನಪಟ್ಟಣ ಮತ್ತು ಹಾಸನ ಮೂಲದ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ತನಿಖೆಯಲ್ಲಿ ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿ ನಂತರ ಹೊರಬಂದ ಮೇಲೆ ದರೋಡೆಗೆ ಸ್ಕೆಚ್ ಹಾಕಿದರೆಂದು ತಿಳಿದುಬಂದಿದೆ. ಮೊದಲು ಪೆಟ್ರೋಲ್ ಬಂಕ್ ಪರಿಶೀಲನೆ ನಡೆಸಿ ನಂತರ ಗ್ಯಾಂಗ್ ಕಟ್ಟಿಕೊಂಡು ದಾಳಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



