ಮನಿಲಾ ಉಪಾಧ್ಯಕ್ಷೆ ಸಾರಾ ಡ್ಯುಟರ್ಟ್ ಅವರು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಅಧ್ಯಕ್ಷರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಸಾಕಷ್ಟು ಬಿಗಿಗೊಳಿಸಲಾಗಿದೆ ಎಂದು ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್‍ರ ಕಚೇರಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ತನ್ನ ಹತ್ಯೆಗೆ ಪಿತೂರಿ ನಡೆದಿದ್ದು ಒಂದು ವೇಳೆ ಇದರಲ್ಲಿ ಅವರು(ಪಿತೂರಿ ಮಾಡಿದವರು) ಯಶಸ್ವಿಯಾದರೆ ಅಧ್ಯಕ್ಷರನ್ನು ಕೊಲ್ಲುವಂತೆ ತನ್ನ ಭದ್ರತಾ ತಂಡಕ್ಕೆ ಸೂಚಿಸಿರುವುದಾಗಿ ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
`ನನ್ನ ಭದ್ರತಾ ಸಿಬ್ಬಂದಿಯ ಜತೆ ಈಗಾಗಲೇ ಮಾತನಾಡಿದ್ದೇನೆ. ಒಂದು ವೇಳೆ ನನ್ನ ಹತ್ಯೆಯಾದರೆ ತಕ್ಷಣ ಫರ್ಡಿನಾಂಡೊ ಮಾಕ್ರೋಸ್, ಅವರ ಪತ್ನಿ ಲಿಝಾ ಅರನೆಟಾ ಮತ್ತು ಅಧ್ಯಕ್ಷರ ಸೋದರ ಸಂಬಂಧಿ ಮಾರ್ಟಿನ್ ರೊಮುಲ್ಡಜ್‍ರನ್ನು ಕೊಲ್ಲುವಂತೆ ತಿಳಿಸಿದ್ದೇನೆ. ಇದು ತಮಾಷೆಯಲ್ಲ’ ಎಂದು ಡ್ಯುಟರ್ಟ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಸುದ್ದಿಗೋಷ್ಠಿಯ ಬಳಿಕ ಪ್ರತಿಕ್ರಿಯಿಸಿರುವ ಅಧ್ಯಕ್ಷರ ಭವನದ ಸಂವಹನಾ ಕಚೇರಿ `ಈ ಸಕ್ರಿಯ ಬೆದರಿಕೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರ ಭದ್ರತಾ ಕಮಾಂಡ್‍ಗೆ ಸೂಚಿಸಲಾಗಿದೆ. ಅಧ್ಯಕ್ಷರ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಅದರಲ್ಲೂ ಈ ಪ್ರಕರಣದಲ್ಲಿ ಸಾರ್ವಜನಿಕವಾಗಿ, ಸ್ಪಷ್ಟವಾಗಿ ಬೆದರಿಕೆ ಒಡ್ಡಲಾಗಿದೆ’ ಎಂದಿದೆ.



