ವಿಜಯಸಾಕ್ಷಿ ಸುದ್ದಿ, ಗದಗ: `ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನಾರಿಗಾದೆಯೋ ಮಾನವ’ ಇಂದು ಈ ಮಾತು ಬದಲಾವಣೆಯಾಗಿದೆ. ಮಾನವನ ಎಲ್ಲಾ ಅಂಗಾಂಗಗಳು ಸತ್ತ ನಂತರವೂ ಉಪಯೋಗಕ್ಕೆ ಬರುತ್ತವೆ. ಈ ಮಹಾನ್ ಕಾರ್ಯಕ್ಕೆ ಬದುಕಿದ್ದಾಗಲೇ ಮನಸ್ಸು ಮಾಡಬೇಕು. ದೇಹದಾನ ಮಾಡಿದ ಕೌತಾಳ ವೀರಪ್ಪನವರ ಬದುಕು ಸಾರ್ಥಕವಾದುದು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2754ನೇ ಶಿವಾನುಭವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇಹದಾನ ಇದೊಂದು ಸಮಾಜ ಸೇವೆ. ದೇಹದಾನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕಾಗಿ ಅನುಕೂಲವಾಗುತ್ತದೆ. ವಿಜ್ಞಾನದ ಪ್ರಗತಿಗೆ, ವೈದ್ಯಕೀಯ ಸಂಶೋಧನೆಗೆ ದೇಹದಾನ ಮುಖ್ಯವಾಗಿದೆ ಎಂದು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಜಿ.ಬಿ. ಪಾಟೀಲ್, 2017ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಂ.ಸಿ. ಐಲಿ ಮಾತನಾಡಿದರು. ಗುರುನಾಥ್ ಸುತಾರ ಹಾಗೂ ಸವಿತಾ ಕುಪ್ಪಸದ ಸಂಗೀತ ಸೇವೆಯನ್ನು ನೆರವೇರಿಸಿದರು. ಧಾರ್ಮಿಕ ಗ್ರಂಥ ಪಠಣವನ್ನು ಹರ್ಷಿತಾ ಬಿ.ಬಳಿಗೇರ ಹಾಗೂ ವಚನ ಚಿಂತನವನ್ನು ರಕ್ಷಿತಾ ಬಿ.ಬಳಿಗೇರ ಮಾಡಿದರು. ದಾಸೋಹ ಸೇವೆಯನ್ನು ವೈಜನಾಥ ಕೌತಾಳ ಹಾಗೂ ಕುಟುಂಬ ವರ್ಗ ಹಾಗೂ 2017ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಂ.ಸಿ. ಐಲಿ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಡಿ.ಜಿ.ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಬಿ. ಗೋವಿಂದಪ್ಪ ಮರಣಾನಂತರ ದೇಹದಾನ ಹಾಗೂ ಅಂಗಾಂಗ ದಾನ ವಿಷಯ ಕುರಿತು ಮಾತನಾಡುತ್ತಾ, ಮರಣಾನಂತರ ವ್ಯಕ್ತಿಯ ಶರೀರ ಉಪಯೋಗವಾದರೆ ಅವನೇ ಉತ್ತಮ ಮಾನವ. ಎಲ್ಲಾ ದಾನಗಳಿಗಿಂತ ದೇಹದಾನ ಮುಖ್ಯವಾದುದು. ದೇಹದಾನ ಮಾಡಿದ ವ್ಯಕ್ತಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕಣ್ಣು, ಮೆದುಳು ಹೀಗೆ ಮಾನವನ 26 ಅಂಗಾಂಗಗಳು ಉಪಯೋಗಕ್ಕೆ ಬರುತ್ತವೆ ಎಂದು ಮಾಹಿತಿ ನೀಡಿದರು.



