ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ರೈತರಿಗೆಂದು ಸರ್ಕಾರ ರೂಪಿಸಿರುವ ಯೋಜನೆ. ಇದು ವಿಶ್ವದ ಅತಿದೊಡ್ಡ ಡಿಬಿಟಿ ಸ್ಕೀಮ್ ಎನಿಸಿದೆ. ಈ ಯೋಜನೆ ಅಡಿ 21ನೇ ಕಂತಿನ ಹಣವನ್ನು ನವೆಂಬರ್ 19ರಂದು ಬಿಡುಗಡೆ ಮಾಡಲಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯನ್ನು 2019 ಫೆಬ್ರವರಿ 24 ರಂದು ಪ್ರಾರಂಭಿಸಲಾಯಿತು.
ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಪ್ರತಿ ವರ್ಷ ತಲಾ 6 ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಮೊದಲ ಕಂತಿನ ಹಣವನ್ನು ಏಪ್ರಿಲ್-ಜುಲೈನಲ್ಲಿ, ಎರಡನೇ ಕಂತಿನ ಹಣವನ್ನು ಆಗಸ್ಟ್-ನವೆಂಬರ್‌ನಲ್ಲಿ ಮತ್ತು ಮೂರನೇ ಕಂತಿನ ಹಣವನ್ನು ಡಿಸೆಂಬರ್-ಮಾರ್ಚ್‌ನಲ್ಲಿ ಜಮಾ ಮಾಡಲಾಗುತ್ತಿದೆ.
ಈ ಹಣವು ರೈತರಿಗೆ ಕೃಷಿ ಪರಿಕರಗಳನ್ನು ಖರೀದಿಸಲು, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚಗಳು ಮತ್ತು ಮದುವೆಯಂತಹ ಇತರ ಖರ್ಚುಗಳನ್ನು ನಿಭಾಯಿಸಲು ನೆರವಾಗಿದೆ.
ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ತಮ್ಮ ಜಮೀನಿನ ವಿವರಗಳನ್ನು ದಾಖಲಿಸಿದ ಹಾಗೂ ಆಧಾರ್‌ನೊಂದಿಗೆ ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಿದ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನಗಳು ದೊರೆಯುತ್ತಿವೆ. ಅರ್ಹ ರೈತರನ್ನು ಗುರುತಿಸಿ ಯೋಜನೆಯಡಿ ಸೇರಿಸಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ಗ್ರಾಮ ಮಟ್ಟದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುತ್ತಿದೆ.
2019ರಲ್ಲಿ ‘ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ’ (ಐಎಫ್‌ಪಿಆರ್‌ಐ) ನಡೆಸಿದ ಅಧ್ಯಯನದ ಪ್ರಕಾರ, ಪಿಎಂ-ಕಿಸಾನ್ ಯೋಜನೆಯಡಿ ವಿತರಿಸಲಾದ ಹಣವು ಗ್ರಾಮೀಣ ಆರ್ಥಿಕ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಿದೆ. ಇದು ರೈತರ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡಲು ಮತ್ತು ಕೃಷಿ ಪರಿಕರಗಳಲ್ಲಿ ಹೂಡಿಕೆ ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅಧ್ಯಯನವು ತಿಳಿಸಿದೆ.



