ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣ ಸಮೀಪದ ಕುರಹಟ್ಟಿ ಕಾಲುವೆ ಬಳಿ ಅಂತರರಾಜ್ಯ ಕಳ್ಳನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಈ ಹಿಂದೆ ಜೂನ್ 6, 2024ರಂದು ಗಂಗಾವತಿ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಇರಾನಿ ಗ್ಯಾಂಗ್‌ನ ಪ್ರಮುಖ ಅಂತರರಾಜ್ಯ ಕಳ್ಳನನ್ನು ಗದಗ ಜಿಲ್ಲೆಯ ಬೆಟಗೇರಿ ಪೊಲೀಸರು ಹೊಳೆಆಲೂರ ರೇಲ್ವೆ ನಿಲ್ದಾಣದಿಂದ ಬಂಧಿಸಿ ಕರೆತರುವ ಸಂದರ್ಭದಲ್ಲಿ ಆರೋಪಿ ಬಗರ್‌ಅಲಿ ಅಮ್ಜದ್‌ಅಲಿ ಇರಾನಿ, ಕುರಹಟ್ಟಿ ಗ್ರಾಮದ ಬಳಿ ಪೊಲೀಸರನ್ನು ಯಾಮಾರಿಸಿ, ವಾಹನದಿಂದ ಜಿಗಿದು ಓಡಿ ಹೊಗುತ್ತಿರುವಾಗ ಪೊಲೀಸ್ ಸಿಬ್ಬಂದಿಗಳು ತಡ ಮಾಡದೆ ಬೆನ್ನು ಹತ್ತಿದ್ದಾರೆ.ಈ ಸಂದರ್ಭದಲ್ಲಿ ಆರೋಪಿಯು ಹನುಮಂತಪ್ಪ ಓಲೇಕಾರ, ಅಶೋಕ ಗದಗ ಎಂಬ ಪೊಲೀಸ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸಿಪಿಐ ಧೀರಜ್ ಶಿಂಧೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿ ಬಗ್ಗದಿದ್ದಾಗ, ಆರೋಪಿಯ ಎಡ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಆರೋಪಿಗೆ ರೋಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ರೋಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಗಾಯಗೊಂಡ ಪೊಲೀಸ್ ಸಿಬ್ಬಂದಿಗಳ ಆರೋಗ್ಯವನ್ನು ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದರು.ಡಿವಾಯ್‌ಎಸ್ಪಿ ಪ್ರಭುಗೌಡ ಕಿರದಳ್ಳಿ, ಡಿವಾಯ್‌ಎಸ್ಪಿ ಮಹಾಂತೇಶ ಸಜ್ಜನ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಪ್ರಕಾಶ ಬಣಕಾರ ಸೇರಿದಂತೆ ಸಿಬ್ಬಂದಿಗಳಿದ್ದರು.
Trending Now



