ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-19 ಹರಾಜು ಪಟ್ಟಿಯ ಮೊದಲ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಭಾರತದ ಯುವ ಬ್ಯಾಟರ್ ಪೃಥ್ವಿ ಶಾ ಆರಂಭಿಕ ಎರಡು ಸುತ್ತುಗಳಲ್ಲಿ ಮಾರಾಟವಾಗದೇ ಉಳಿದಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಪೃಥ್ವಿ ಶಾ ಅವರಿಗೆ ಅದೃಷ್ಟ ಒಲಿದಿದೆ.
75 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಬಳಿಕ ಅಕ್ಸಿಲರೇಟರ್ ರೌಂಡ್‌ನಲ್ಲೂ ಅವರು ಮಾರಾಟವಾಗದೇ ಉಳಿದರು. ಎರಡು ಸುತ್ತುಗಳಲ್ಲಿ ಆಸಕ್ತಿ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪೃಥ್ವಿ ಶಾ ಈ ಬಾರಿ ಕೂಡ ಅನ್ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಾಗಿತ್ತು.
ಆದರೆ ಹರಾಜಿನ ಅಂತಿಮ ಸುತ್ತಿನಲ್ಲಿ ಮೂರನೇ ಬಾರಿ ಹೆಸರು ಕರೆಸಿಕೊಂಡ ಪೃಥ್ವಿ ಶಾ ಅವರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಿಡ್ ಮಾಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 75 ಲಕ್ಷ ರೂಪಾಯಿಗೆ ಪೃಥ್ವಿ ಶಾ ಅವರನ್ನು ಖರೀದಿಸಿದ್ದು, ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಯುವ ಬಲಗೈ ಬ್ಯಾಟರ್ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ.
ಈ ಹಿಂದೆ 2024ರ ಐಪಿಎಲ್ ಸೀಸನ್‌ನಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಐಪಿಎಲ್ 2024ರಲ್ಲಿ 7.5 ಕೋಟಿ ರೂಪಾಯಿ ಸಂಬಳ ಪಡೆದಿದ್ದ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಈ ಬಾರಿ ಕಡಿಮೆ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಪೃಥ್ವಿ ಶಾ ಅವರನ್ನು ಕೊನೆಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೇ ಕೈ ಹಿಡಿದಿದ್ದು, ಅವರ ಐಪಿಎಲ್ ಕರಿಯರ್‌ಗೆ ಮತ್ತೊಂದು ಅವಕಾಶ ದೊರಕಿದೆ.



