ತುಮಕೂರು:- ತುಮಕೂರು ತಾಲೂಕಿನ ಬೆಳಧರ ಗ್ರಾಮದ ಬಳಿ ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಲ್ಲಿದ್ದ ಐವರು ಪೈಕಿ ಮೂವರು ದುರ್ಮರಣ ಹೊಂದಿರುವ ಘಟನೆ ಜರುಗಿದೆ.
ಮೃತರನ್ನು 27 ವರ್ಷದ ಶಿವಕುಮಾರ್, 50 ವರ್ಷದ ಗೋವಿಂದಪ್ಪ ಮತ್ತು 30 ವರ್ಷದ ಶಿವಶಂಕರ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಮಂಜುನಾಥ ದರ್ಶನಕ್ಕೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಅಪಘಾತದ ನಂತರ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತುಮಕೂರಿನಿಂದ ಪಾವಗಡದತ್ತ ಖಾಸಗಿ ಬಸ್ ತೆರಳುತ್ತಿತ್ತು. ಇದೇ ವೇಳೆ ಕೊರಟಗೆರೆ ಕಡೆಯಿಂದ ತುಮಕೂರು ಕಡೆ ಕಾರ್ ಬರುತ್ತಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿ ಕಾರ್ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಾಯಗೊಂಡ 28 ವರ್ಷದ ಶಂಕರ್ ನನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ, ಮತ್ತೋರ್ವ ಕಿತ್ತಿನಾಗೇನಹಳ್ಳಿಯ 28 ವರ್ಷದ ವೇಣುಗೋಪಾಲ್ ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳು ಜಿಲ್ಲೆಯ ಕೊರಟಗೆರೆ ತಾಲೂಕಿನ ಅಕ್ಕಪಕ್ಕದ ಹಳ್ಳಿಯ ನಿವಾಸಿಗಳು ಎಂದು ತಿಳಿದುಬಂದಿದೆ.



