ವಿಜಯಸಾಕ್ಷಿ ಸುದ್ದಿ, ರೋಣ: ನಿರಂತರ ಮಳೆಯಿಂದ ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರಾಜ್ಯ ತಂಡ ಎರಡೂ ತಾಲೂಕುಗಳಲ್ಲಿ ಸಂಚರಿಸಿ, ಬೆಳೆಹಾನಿ ಪ್ರಮಾಣವನ್ನು ವೀಕ್ಷಿಸಿ ರೈತರಿಂದ ಅಗತ್ಯ ಮಾಹಿತಿ ಪಡೆದುಕೊಂಡಿತು.
ಗುರುವಾರ ರೋಣ ತಾಲೂಕಿನ ಅಬ್ಬಿಗೇರಿ, ರೋಣ, ಬಾಸಾಲಾಪೂರ, ಕೊತಬಾಳ, ಹಿರೇಹಾಳ, ಹೊಸಳ್ಳಿ ಮತ್ತು ಗಜೇಂದ್ರಗಡ ತಾಲೂಕಿನ ನಿಡಗುಂದಿ, ಸೂಡಿ, ನರೆಗಲ್ಲ ಗ್ರಾಮಗಳ ಜಮೀನುಗಳಿಗೆ ತೆರಳಿ ಅಪಾರ ಮಳೆಯಿಂದ ಆಗಿರುವ ನಷ್ಟವನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ಅಬ್ಬಿಗೇರಿ ಹಾಗೂ ರೋಣ ಪಟ್ಟಣದ ಸಾರಿಗೆ ಘಟಕದ ಬಳಿ ಮುಂಗಾರು ಬೆಳೆಯಾದ ಹೆಸರು ವೀಕ್ಷಿಸಿದ ಅಧಿಕಾರಿಗಳ ತಂಡ, ನಂತರ ಬಾಸಾಲಾಪೂರ ಗ್ರಾಮಕ್ಕೆ ತೆರಳಿತು. ಅಲ್ಲಿ ಸಂಜಯ ನಾಡಗೌಡ ಎಂಬ ರೈತರು ತಮ್ಮ ಜಮೀನಿನಲ್ಲಿ 18 ಎಕರೆ 19 ಗುಂಟೆಯಲ್ಲಿ ಬೆಳೆದ ಹೆಸರು ಬೆಳೆಯನ್ನು ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದರು. ಇದನ್ನು ವೀಕ್ಷಿಸಿದ ಪ್ರಕೃತಿ ವಿಕೋಪ ತಂಡದ ಅಧಿಕಾರಿಗಳು ಕೃಷಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ತಹಸೀಲ್ದಾರ ನಾಗರಾಜ ಕೆ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಬೆಳೆಯನ್ನು ಕಟಾವು ಮಾಡಿದರೂ ಸಹ ರೈತರಿಗೆ ಉಪಯೋಗವಿಲ್ಲ. ಹೀಗಾಗಿ ಬಿಟ್ಟಿದ್ದಾರೆ ಎಂದು ವಿವರಿಸಿದರು.
ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ವಿಪರೀತ ಮಳೆಯಿಂದ ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಶೇಂಗಾ ಸೇರಿದಂತೆ ಇತರೆ ಬೆಳೆಗಳು ಸಹ ತೇವಾಂಶ ಹೆಚ್ಚಳದಿಂದ ಹಳದಿ ರೋಗಕ್ಕೆ ತಿರುಗಿಕೊಂಡಿವೆ. ಇದರಿಂದ ಇಳುವರಿ ಕುಂಠಿತಗೊಳ್ಳಲಿದ್ದು, ಶೀಘ್ರವೇ ವರದಿ ಸಲ್ಲಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಪ್ರಕೃತಿ ವಿಕೋಪ ತಂಡದ ಜಂಟಿ ನಿರ್ದೇಶಕ ಆರ್.ವಿ. ಮಂಜುನಾಥರಿಗೆ ರೈತರು ಮನವಿ ಮಾಡಿದರು.
ತಹಸೀಲ್ದಾರ ನಾಗರಾಜ ಕೆ, ಕೃಷಿ ಇಲಾಖೆಯ ಉಪ ಜಂಟಿ ನಿರ್ದೇಶಕ ಫಾಲಾಕ್ಷಗೌಡ, ಸಹಾಯಕ ನಿರ್ದೇಶಕ ಎಸ್.ಎಫ್. ತಹಸೀಲ್ದಾರ್, ತೋಟಗಾರಿಕೆ ಸಹಾಯಕ ನಿರ್ದೇಶಕ ಗಿರೀಶ ಹೊಸೂರ, ಶಿವಪುತ್ರಪ್ಪ ದೊಡ್ಡಮನಿ, ಜಾಫರ ಹವಾಲ್ದಾರ, ಓಲೇಕಾರ, ಕುಂಬಾರ ಸೇರಿಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರಂತರ ಮಳೆಯಿಂದ ರೋಣ, ಗಜೇಂದ್ರಗಡ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳು ಹಾನಿಗೊಳಗಾಗಿದ್ದು, ನಾನು ಸ್ವತಃ ಅಧಿಕಾರಿಗಳ ಸಭೆ ನಡೆಸಿ ಜಂಟಿ ಸಮೀಕ್ಷೆ ನಡೆಸುವ ಮೂಲಕ ವರದಿ ಸಲ್ಲಿಸಿ ಎಂದು ತಿಳಿಸಿದ್ದೆ. ಇದೀಗ ರಾಜ್ಯ ತಂಡ ಎರಡೂ ತಾಲೂಕಿನಲ್ಲಿ ಬೆಳೆ ಹಾನಿ ಪ್ರಮಾಣವನ್ನು ವೀಕ್ಷಣೆ ಮಾಡಿದೆ. ನಿರಂತರ ಮಳೆಯಿಂದ ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ದೊರೆಯಬೇಕು ಎಂಬುದು ನನ್ನ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.



