ವಿಜಯಸಾಕ್ಷಿ ಸುದ್ದಿ, ಗದಗ: ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಸಿದ್ದ ಓಟರ್ ಅಧಿಕಾರ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ವ್ಯಕ್ತಿಯೊಬ್ಬ ಮೋದಿರವರ ತಾಯಿಯ ವಿರುದ್ಧ ಅವಾಚ್ಯ ಪದಗಳಲ್ಲಿ ನಿಂದಿಸಿದ್ದು, ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ನಡೆದ ಘಟನೆಯಾಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾ ದೇಶದ ಜನರ ಎದುರು ಸಣ್ಣವರಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವವೇ ಕೊಂಡಾಡುತ್ತಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ದೇಶ ಅಭಿವೃದ್ಧಿ, ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ. ಮೋದಿಯವರ ಆಳ್ವಿಕೆಯಲ್ಲಿ ಭಾರತ ಇಂದು ಸ್ವಾವಲಂಬಿ ದೇಶವಾಗಿ, ಆರ್ಥಿಕ ಸದೃಢ ದೇಶವಾಗಿ ಬಲಿಷ್ಠವಾಗಿದೆ. ಇದನ್ನು ಸಹಿಸಲಾರದ ರಾಹುಲ್ ಗಾಂಧಿ ನಿಂದಿಸಿದ್ದು ಮೋದಿಜೀರವರ ತಾಯಿಗಷ್ಟೆ ಅಲ್ಲ, ಈ ಅವಮಾನ ಇಡೀ ದೇಶದ ತಾಯಂದಿರಿಗೆ ಮಾಡಿದ ಅವಮಾನವಾಗಿದೆ.
ತಕ್ಷಣ ರಾಹುಲ್ ಗಾಂಧಿ ದೇಶದ ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದರೆ ಮಾತೆಯರ ನಿಂದನಾ ಶಾಪ ರಾಹುಲ್ ಗಾಂಧಿಗೆ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



