ರಾಯಚೂರು: ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ 700 ಕುರಿಗಳ ಶೆಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ನಿನ್ನೆ ರಾತ್ರಿ 2:30 ಗಂಟೆಗೆ ಬೆಂಕಿ ತಗುಲಿದ್ದು, ಇಡೀ ಶೆಡ್ ಸುಟ್ಟು ಕರಕಲಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ.
ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1 ಕೋಟಿ ರೂ ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದರು. ಇದರ 47 ಲಕ್ಷ ರೂ ಕೇಂದ್ರ ಸರ್ಕಾರದ ಸಬ್ಸಿಡಿ ಸಹಿತ, ಉಳಿದ ಹಣವನ್ನು ಸಾಲದಿಂದ ಭರಿಸಿದ್ದಾರೆ. ಶೆಡ್‌ನಲ್ಲಿ ಸುಮಾರು 700 ಕುರಿಗಳನ್ನು ಸಾಕಾಣಿಕೆ ಮಾಡಲಾಗುತ್ತಿತ್ತು, 6 ಕಾರ್ಮಿಕರು ಅವುಗಳ ಆರೈಕೆಗೆ ನಿಯೋಜಿತರಾಗಿದ್ದರು.
ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಮತ್ತು ಸ್ಥಳೀಯರ ಸಹಾಯದಿಂದ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಶೆಡ್‌ನಲ್ಲಿ 700ಕ್ಕೂ ಹೆಚ್ಚು ಕುರಿಗಳ ಪೈಕಿ 525 ಕುರಿಗಳಿಗೆ ವಿಮೆ ಇದೆ. ಅವಘಡದಿಂದ ಸುಮಾರು 2 ಕೋಟಿ ರೂ. ನಷ್ಟ ಸಂಭವಿಸಿದ್ದು, ಶೆಡ್ ಮಾಲೀಕರ ಸಂಬಂಧಿ ಪದ್ಮಾನಾಯ್ಡು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿಯುತ್ತಿದೆ.



