ರಾಯಚೂರು: ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಅರಕೇರಾ ತಾಲ್ಲೂಕಿನ ಹಾಳಜಾಡಲದಿನ್ನಿ ಗ್ರಾಮದಲ್ಲಿ ಜರುಗಿದೆ.
ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಗುಡುಗು ಸಹಿತ ಮಳೆಯ ಸಂದರ್ಭದಲ್ಲಿ ಸಂಭವಿಸಿದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಗಳವಾರ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುತ್ತಿತ್ತು. ಈ ವೇಳೆ ಜಮೀನಿನಲ್ಲಿದ್ದ ಎತ್ತರದ ತೆಂಗಿನ ಮರಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ತೀವ್ರತೆಗೆ ಮರಕ್ಕೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಅದೃಷ್ಟವಶಾತ್ ಘಟನೆಯ ವೇಳೆ ಮರದ ಹತ್ತಿರ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.



