ವಿಜಯಸಾಕ್ಷಿ ಸುದ್ದಿ, ಡಂಬಳ: ಅಣ್ಣ-ತಂಗಿಯರ ರಕ್ಷಾಬಂಧನ ಹಬ್ಬವನ್ನು ಡಂಬಳ ಹೋಬಳಿಯ ಗ್ರಾಮಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಭ್ರಾತೃತ್ವ ಬೆಸೆಯುವ ಹಬ್ಬದಲ್ಲಿ ಮುಂಜಾನೆಯಿಂದಲೇ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ನಂತರ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮನೆಯಲ್ಲಿನ ಸಹೋದರರಿಗೆ ಸಹೋದರಿಯರು ಆರತಿ ಬೆಳಗಿ ಪರಸ್ಪರ ರಕ್ಷಾಬಂಧನ ಕಟ್ಟಿ ಹಬ್ಬದ ಶುಭಾಶಯ ಕೋರಿದರು.
ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮನೆಗಳಿಗೆ ತೆರಳಿ ರಕ್ಷಾಬಂಧನ ಆಚರಿಸುವ ಮೂಲಕ ಭ್ರಾತೃತ್ವ ಸಂಬಂಧ ಸಾರುತ್ತ ಹಬ್ಬದ ಶುಭಾಶಯ ಕೋರಿದರು. ಅಣ್ಣ-ತಂಗಿಯರ ನಡುವಿನ ಪವಿತ್ರ ಬಾಂಧವ್ಯ ಸಾರುವ ರಕ್ಷಾ ಬಂಧನ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪವನ್ನು ಮಾಡುವ ಹಬ್ಬವಾಗಿದೆ ಎಂದು ಮುಂಡರಗಿ ಆರ್‌ಎಫ್‌ಒ ಮಂಜುನಾಥ ಮೇಗಲಮನಿ ಪ್ರತಿಕ್ರಿಯಿಸಿದರು.



