HomeArt and Literature‘ರಮಜಾನ್' ಒಂದು ಆರಾಧನೆ

‘ರಮಜಾನ್’ ಒಂದು ಆರಾಧನೆ

For Dai;y Updates Join Our whatsapp Group

Spread the love

ಮಾನವ ಕುಲದ ಮೇಲೆ ಅಲ್ಲಾಹನ ಕೊಡುಗೆ ಅಪಾರವಾಗಿದೆ. ಅಲ್ಲಾಹನ ಈ ಮಹಾನ್ ಕೊಡುಗೆಗೆ ಪ್ರತಿಯಾಗಿ ಮಾನವನು ಉಪವಾಸ ವ್ರತಾಚರಿಸುವ ಮೂಲಕ ಸಂತೋಷ, ಕೃತಜ್ಞತೆಯನ್ನು ಅರ್ಪಿಸುತ್ತಾನೆ. ನಾವು ಅವನ ದಾಸರು ಮತ್ತು ಆರಾಧಕರಾಗಿದ್ದೇವೆ. ರಮಜಾನ ತಿಂಗಳು ಉಪವಾಸ ವೃತವು ಒಂದು ಪವಿತ್ರವಾದ ಆರಾಧನೆಯಾಗಿರುವಂತೆಯೇ ನಮ್ಮ ಆಧ್ಯಾತ್ಮಿಕ ಮತ್ತು ನೈತಿಕ ತರಬೇತಿಯ ಅತ್ಯತ್ತಮ ದಾರಿಯೂ ಆಗಿದೆ.

ಉಪವಾಸ ವ್ರತದ ಮೂಲ ಉದ್ದೇಶ ಆತ್ಮದ ಪರಿಶುದ್ಧತೆ. ಎಲ್ಲಿಯವರೆಗೆ ವ್ಯಕ್ತಿಯು ಆತ್ಮ ನಿಯಂತ್ರಣವನ್ನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಅವನಲ್ಲಿ ಧರ್ಮನಿಷ್ಠೆಯು ಬೆಳೆಯಲಾರದು. ಚಿತ್ತಾಕಾಂಕ್ಷೆಗಳ ಪ್ರವಾಹದಲ್ಲಿರುವ ವ್ಯಕ್ತಿಗೆ ಅಲಾಹನ ಮಹಾನತೆಯ ಪರಿವೆಯೂ ಇರುವುದಿಲ್ಲ ಮತ್ತು ಜೀವನದ ಉನ್ನತ ವಾಸ್ತವಿಕತೆ ಬೆಳೆಯುವುದಿಲ್ಲ. ತನ್ನ ಸೃಷ್ಟಿಯ ವಾಸ್ತವಿಕ ಬೇಡಿಕೆಗಳ ಕಡೆಗೆ ಗಮನ ಹರಿಸುವುದರಿಂದ ಅವನನ್ನು ತಡೆಯುತ್ತದೆ. ಉಣ್ಣುವ, ಕುಡಿಯುವ ಮತ್ತು ಲೈಂಗಿಕ ಆಸೆಗಳ ಈಡೇರಿಕೆಗಳ ಹೊರತು ಇನ್ನೂ ಕೆಲವು ವಿಷಯಗಳು ನಮ್ಮ ಗಮನವನ್ನು ಬಯಸುತ್ತವೆ ಎಂಬುದನ್ನು ಉಪವಾಸ ವೃತವು ಪ್ರಾಯೋಗಿಕವಾಗಿ ತೋರಿಸಿಕೊಡುತ್ತದೆ. ಉಪವಾಸ ವೃತವು ದಾಸನನ್ನು ಅಲ್ಲಾಹನೆಡೆಗೆ ಮತ್ತು ಜೀವನದ ಉನ್ನತ ವಾಸ್ತವಿಕತೆಗಳ ಕಡೆಗೆ ಹಮನಹರಿಸುವಂತೆ ಮಾಡುತ್ತದೆ. ಅಲ್ಲಿಂದ ಅವನು ತನ್ನ ಪ್ರಭುವಿಗೆ ತೀರಾ ನಿಕಟನಾಗುತ್ತಾನೆ, ಅಲ್ಲಿ ಅಂಧಕಾರವು ಕರಗಿಹೋಗುತ್ತದೆ ಮತ್ತು ಆಧ್ಯಾತ್ಮಿಕವಾದ ಪರದೆಗಳೆಲ್ಲವೂ ಸರಿದು ಹೋಗುತ್ತವೆ.

ರಮಜಾನ ತಿಂಗಳ ಉಪವಾಸ ವೃತವು ಮೇಲ್ನೋಟಕ್ಕೆ ಆಹಾರ, ಪಾನಿಯ ಸೇವನೆ ಮತ್ತು ಇತರೆ ಸೇವನೆಯಿಂದ ತಡೆದಿರಿಸಿಕೊಳ್ಳುವುದರ ಹೆಸರಾಗಿದೆ. ಆದರೆ ಆಂತರಿಕವಾಗಿ ಉಪವಾಸವು ವ್ಯಕ್ತಿಗೆ ಅಕಾಂಕ್ಷೆಗಳ ನಿಯಂತ್ರಣ ಮತ್ತು ಧರ್ಮ ನಿಷ್ಠಯ ಜೀವನ ಲಭಿಸುವುದರ ಹೆಸರಾಗಿದೆ. ಕೆಲವೊಮ್ಮೆ ವ್ಯಕ್ತಿಯು ಮೇಲ್ನೋಟಕ್ಕೆ ಉಪವಾಸಿಗನಾಗಿ ಕಾಣುತ್ತಾನೆ. ಆದರೆ ವಾಸ್ತವದಲ್ಲಿ ಅವನ ಉಪವಾಸವು ವ್ರತವಾಗಿರುವುದಿಲ್ಲ. ಉಪವಾಸ ವೃತ ಎಂಬುದು, ತನ್ನನ್ನು ತಾನು ಅಲ್ಲಾಹನಿಗಾಗಿ ಸಕಲ ವಸ್ತು ವಿಷಯಗಳಿಂದ ಮುಕ್ತನಾಗುವ ಮತ್ತು ಪರಿಪೂರ್ಣವಾಗಿ ಅಲ್ಲಾಹನ ಕಡೆಗೆ ಗಮನ ಕೇಂದ್ರಿತನಾಗುವುದರ ಹೆಸರಾಗಿದೆ.

ನಾವು ರಮಜಾನ ತಿಂಗಳ ಉಪವಾಸ ವ್ರತದ ಸ್ಥಿತಿಯಲ್ಲಿ ಬಹುತೇಕವಾಗಿ ದೇವಚರರ ಗುಣ ಅವರು ಅನುಸರಿಸುವ ಮಾರ್ಗಗಳು ಲಭಿಸುತ್ತವೆ. ದೇವಚರರು ಆಹಾರ ಪಾನೀಯ ಸೇವನೆಯಿಂದ ನಿರಪೇಕ್ಷರಾಗಿದ್ದಾರೆ. ಅಲ್ಲಾಹನ ಸ್ತುತಿ ಮತ್ತು ಆರಾಧನೆಗಳೇ ಅವರಿಗೆ ಆಹಾರ. ಉಪವಾಸ ವ್ರತಾಚರಣೆಯ ಸ್ಥಿತಿಯಲ್ಲಿ ವಿಶ್ವಾಸಿ ದಾಸನು ತನ್ನ ಚಿತ್ತಾಕಾಂಕ್ಷೆ ಮತ್ತು ಆಹಾರ ಪಾನೀಯ, ದುಶ್ಚಟಗಳಿಂದ ದೂರವುಳಿದು, ದೇವನ ದಾಸ್ಯರಾಧನೆಯಲ್ಲಿ ತನ್ನ ತನು ಮನವನ್ನು ತಲ್ಲೀನನಾಗಿರುತ್ತಾನೆ.

ಪ್ರವಾದಿಯರ್ವರು(ಸ) ಉಪವಾಸದ ತಿಂಗಳಲ್ಲಿ `ಸಹನೆಯ ತಿಂಗಳು’ ಎಂದು ಹೇಳಿರುವುದು ಉಪವಾಸ ವ್ರತವು ಒಂದು ಅತ್ಯಂತ ಪರಿಶುದ್ಧ ಆರಾಧನೆಯಾಗಿದೆ. ಉಪವಾಸ ವ್ರತವು ಅಲ್ಲಾಹನ ಮಹಾನತೆ ಮತ್ತು ಶ್ರೇಷ್ಟತೆಯ ಸನ್ಮಾರ್ಗ ದರ್ಶನ ಮತ್ತು ಕೃತಜ್ಞತಾರ್ಪಣೆಯ ದಾರಿಯಾಗಿದೆ. ರಮಜಾನಿನಲ್ಲಿ ಎಲ್ಲರೂ ಒಟ್ಟಿಗೆ ಉಪವಾಸ ವ್ರತಾಚರಿಸುವುದರಿಂದ ಮನಸ್ಸಿನ ಶಾಂತಿ ಧರ್ಮಶೀಲತೆ ಆಧ್ಯಾತ್ಮಿಕತೆ ಬೆಳೆಯುತ್ತದೆ.

ಈ ರಮಜಾನ್ ಉಪವಾಸ ವ್ರತದ ಉದ್ದೇಶ ಕೇವಲ ಉಪವಾಸದ ಕಾಲಕ್ಕೆ ಸೀಮಿತವಲ್ಲ. ಬದಲಾಗಿ ಅದು ಮಾನವನ ಇಡೀ ಜೀವನಕ್ಕೆ ಸೀಮಿತವಾಗಿದೆ. ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ. ಅವನು, ಹೆಪ್ಪುಗಟ್ಟಿದ ರಕ್ತದ ಒಂದು ಪಿಂಡದಿಂದ ಮಾನವನನ್ನು ಸೃಷ್ಟಿಸಿದನು, ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು, ಮಾನವನು ತಿಳಿದಿರದಂತಹ ಜ್ಞಾನವನ್ನು ಅವನಿಗೆ ದಯಪಾಲಿಸಿದನು (ಪವಿತ್ರ ಕುರ್‌ಆನ್:96:1:5).ಇದುವೇ ಪ್ರಪ್ರಥಮವಾಗಿ ಅವರ್ತೀಗೊಂಡ ಪವಿತ್ರ ಕುರ್‌ಆನಿನ ಸೂಕ್ತಗಳು, ಅದು ಪವಿತ್ರ ರಮಜಾನ್ ತಿಂಗಳ 18ನೇ ಶುಕ್ರವಾರ ರಾತ್ರಿ (ಕ್ರಿ.ಶ. 610 ಆಗಸ್ಟ್ 17ನೆಯ) ದಂದು ‘ಅಲ್ ಅಲಕ್’ ಎಂಬ ಅಧ್ಯಾಯದ ಮೊದಲ ಐದು ವಚನಗಳು.

ಉಪವಾಸ ವ್ರತವು ಅಲ್ಲಾಹನ ಮಹಾನತೆ ಮತ್ತು ಶ್ರೇಷ್ಟತೆಯ ಪ್ರಕಟಣೆಯಾಗಿದೆ ರಮಜಾನ ತಿಂಗಳಲ್ಲಿ ಒಂದೆಡೆ ಮಾನವನ ದಾಸ್ಯತನ ಮತ್ತು ವಿನೀತತೆಯು ಪ್ರಕಟವಾಗಿದೆ. ಇನ್ನೊಂದೆಡೆ ಅಲ್ಲಾಹನ ಪ್ರಭುತ್ವ ಮತ್ತು ಮಹಾನತೆಯ ಪ್ರಕಟವಾಗಿದೆ. ಉಪವಾಸ ವ್ರತವು ನಮಗೆಲ್ಲರಿಗೂ ಒಂದು ಪವಿತ್ರ ಆರಾಧನೆಯಾಗಿದೆ. ನಮ್ಮ ಸಂತೋಷವನ್ನು ವಿಶೇಷವಾದ ರಕ್ಬೀರ ಮತ್ತು ನಮಾಝನ ಮೂಲಕ ಪ್ರಕಟ ಪಡಿಸುತ್ತೇವೆ. ಅಲ್ಲಾಹನ ಸನ್ನಿಧಿಯಲ್ಲಿ ದಾಸನ ಕೃತಜ್ಞತಾರ್ಪಣೆಯೂ ಆಗಿದೆ. ಉಪವಾಸ ವ್ರತವು ಸಂಪೂರ್ಣವಾಗಿ ವಿನಯಶೀಲತೆಯ ಗುಣವಾಗಿದೆ. ಪಾಪಗಳಿಗೆ ಪ್ರಾಯಃಶ್ಚಿತದಲ್ಲಿ ಉಪವಾಸ ವ್ರತಕ್ಕೆ ಮಹತ್ತರವಾದ ಪಾತ್ರವಿರುವುದಕ್ಕೆ ಇದುವೆ ಕಾರಣವಾಗಿದೆ.

-ಡಾ. ತಯಬಅಲಿ ಅ.ಹೊಂಬಳ.

ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!