HomeEntertainmentಕನ್ನಡದ ಮೊದಲ ವಾಕ್ಚಿತ್ರ "ಸತಿ ಸುಲೋಚನ" ಮರು ಸೃಷ್ಟಿ .! ಈ ಚಿತ್ರಕ್ಕೆ ಪಿ.ಶೇಷಾದ್ರಿ ನಿರ್ದೇಶನ...

ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಮರು ಸೃಷ್ಟಿ .! ಈ ಚಿತ್ರಕ್ಕೆ ಪಿ.ಶೇಷಾದ್ರಿ ನಿರ್ದೇಶನ ಹಾಗೂ ಸೃಜನ್ ಲೋಕೇಶ್ ನಿರ್ಮಾಣ

For Dai;y Updates Join Our whatsapp Group

Spread the love

3.3.1934 ಅಂದರೆ ಸರಿಯಾಗಿ 91 ವರ್ಷಗಳ ಹಿಂದೆ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬಿಡುಗಡೆಯಾಗಿತ್ತು. ನಾಟಕದಲ್ಲಿ ಕಲಾವಿದರ ಅಭಿನಯವನ್ನು ನೋಡಿದ ಜನರು ತೆರೆಯ ಮೇಲೆ ಮೊದಲ ವಾಕ್ಚಿತ್ರವನ್ನು ನೋಡಿ ಮೂಕ ವಿಸ್ಮಿತರಾದರು.

ಹಿರಿಯ ನಟ ಆರ್ ನಾಗೇಂದ್ರರಾಯರ ಸಲಹೆ ಮೇರೆಗೆ ರಾಜಸ್ಥಾನ ಮೂಲದವರಾದ ಚಮನ್ ಲಾಲ್ ಡೊಂಗಾಜಿ ಅವರು ನಿರ್ಮಾಣ ಮಾಡಿದ ಈ ಚಿತ್ರವನ್ನು ವೈ.ವಿ.ರಾವ್ ನಿರ್ದೇಶನ ಮಾಡಿದ್ದರು. ಖ್ಯಾತ ನಟ ಲೋಕೇಶ್ ಅವರ ತಂದೆ ಹಾಗೂ ಸೃಜನ್ ಲೋಕೇಶ್ ತಾತಾ ಸುಬ್ಬಯ್ಯ‌ ನಾಯ್ಡು ಈ ಚಿತ್ರದ ನಾಯಕನಾಗಿ, ತ್ರಿಪುರಾಂಬ ನಾಯಕಿಯಾಗಿ ಅಭಿನಯಿಸಿದ್ದರು. 91 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಯಾವುದೇ ವಿಡಿಯೋ ತುಣುಕುಗಳು ಲಭ್ಯವಿಲ್ಲ. ಕೇವಲ ಕೆಲವೆ ಕೆಲವು ಸ್ಥಿರಚಿತ್ರಗಳಷ್ಟೇ ಇದೆ.

ತಮ್ಮ ತಾತಾ ನಾಯಕರಾಗಿ ನಟಿಸಿದ್ದ ಈ ಪ್ರಥಮ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ಹೆಸರಾಂತ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನ ಮಾಡಲಿದ್ದಾರೆ. ಈ ವಿಷಯದ ಕುರಿತು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸೃಜನ್ ಲೋಕೇಶ್ ಹಾಗೂ ಪಿ.ಶೇಷಾದ್ರಿ ಮಾತನಾಡಿದರು.

ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯಾಗಿ 91 ವರ್ಷಗಳಾಗಿದೆ. 3.3.1934 ರಂದು ಸಂಜೆ 7.30ಕ್ಕೆ ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರವನ್ನು ನಾವು ನೋಡೋಣ ಎಂದರೆ ಲಭ್ಯವಿಲ್ಲ. ಕೇವಲ ಸ್ಥಿರಚಿತ್ರಗಳಷ್ಟೇ ಇದೆ.‌ “ಸತಿ ಸುಲೋಚನ” ರಾಮಾಯಣದ ಒಂದು ಉಪಕಥೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದಿದ್ದ ಈ ನಾಟಕವನ್ನು ವೈ.ವಿ‌.ರಾವ್ ಅವರು ಸಿನಿಮಾ ರೂಪಕ್ಕೆ ತಂದರು. ಚಿಕ್ಕಪೇಟೆಯಲ್ಲಿ ಪಾತ್ರೆ ವ್ಯಾಪಾರಿಗಳಾಗಿದ್ದ ಚಮನ್ ಲಾಲ್ ಡೊಂಗಾಜಿ ಅವರು ಸಹೋದರ ಭೂರ್ ಮಲ್ ಡೊಂಗಾಜಿ ಅವರ ಜೊತೆಗೂಡಿ 40 ಸಾವಿರ ಖರ್ಚಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸುಬ್ಬಯ್ಯ ನಾಯ್ಡು, ತ್ರಿಪುರಾಂಬ, ಆರ್ ನಾಗೇಂದ್ರರಾಯರು,

ಲಕ್ಷ್ಮೀ ಬಾಯಿ, ಕಮಲ ಬಾಯಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಮಹಾರಾಷ್ಟ್ರದ ಕೊಲ್ಲಾಪುರದ ಬಳಿ ನಿರ್ಮಿಸಲಾಗಿದ್ದ ಸೆಟ್ ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಸುಮಾರು ಎರಡು ಸಾವಿರ ಜನರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಂತೆ. ವಿದ್ಯುತ್ ದೀಪಗಳಿಲ್ಲದೆ ಕೇವಲ ಸೂರ್ಯನ ಬೆಳಕನೇ ನಂಬಿಕೊಂಡು ಮಾಡಿದ ಚಿತ್ರವಿದು. ಈಗ ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಸೃಜನ್ ಲೋಕೇಶ್ ಮುಂದಾಗಿದ್ದಾರೆ. ನಾನು ನಿರ್ದೇಶನ ಮಾಡುತ್ತಿದ್ದೇನೆ. ಸುಬ್ಬಯ್ಯ ನಾಯ್ಡು ಅವರು ಈ ಚಿತ್ರದಲ್ಲಿ ಇಂದ್ರಜಿತುವಿನ ಪಾತ್ರದಲ್ಲಿ ನಟಿಸಿದ್ದರು. ಈಗ ಆ ಪಾತ್ರವನ್ನು ಸೃಜನ್ ಲೋಕೇಶ್ ಅವರೆ ಮಾಡುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಿಮ್ಮೆಲ್ಲರ ಸಹಕಾರ ನಮಗಿರಲಿ ಎಂದರು ಪಿ.ಶೇಷಾದ್ರಿ.

ನಮ್ಮ ತಾತಾ ನಾಯಕರಾಗಿ ನಟಿಸಿದ್ದ ಮೊದಲ ವಾಕ್ಚಿತ್ರ “ಸತಿ‌ ಸುಲೋಚನ” ಬಿಡುಗಡೆಯಾಗಿ 91 ವರ್ಷಗಳಾಗಿದೆ ಈ ಸಂದರ್ಭದಲ್ಲಿ ಈ ಚಿತ್ರವನ್ನು ಮರು ಸೃಷ್ಟಿ ಮಾಡಲು ಲೋಕೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮುಂದಾಗಿದೆ ಎಂದು ಮಾತನಾಡಿದ ನಟ ಸೃಜನ್ ಲೋಕೇಶ್, ಈಗ ಈ ಚಿತ್ರವನ್ನು ಪಿ.ಶೇಷಾದ್ರಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಅಂದುಕೊಂಡ ಹಾಗೆ ಆದರೆ ಇಂದಿನಿಂದ ಒಂದು ವರ್ಷಕ್ಕೆ‌ ಸರಿಯಾಗಿ ಅಂದರೆ 3.3.2026 ರಂದು ಮರು ಸೃಷ್ಟಿಯಾದ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಆ ನಿಟ್ಟಿನಲ್ಲಿ ನಾವು ಈಗಾಗಲೇ ಕೆಲಸ ಆರಂಭಿಸಿದ್ದೇವೆ. ಈ ಚಿತ್ರವನ್ನು ಮರುಸೃಷ್ಟಿ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ಎಲ್ಲರ ಸಹಕಾರ ಅಗತ್ಯ. ಈ ಚಿತ್ರ ನನ್ನ ಕನಸು.‌ ಹಾಗಾಗಿ “ಸತಿ ಸುಲೋಚನ” ಮರು ಸೃಷ್ಟಿ ಆಗಿ ಬಿಡುಗಡೆಯಾಗವವರೆಗೂ ನಾನು ಬೇರೆ ಯಾವುದೇ ವಿಷಯದ ಬಗ್ಗೆ ಗಮನ ಕೊಡುವುದಿಲ್ಲ. ನನ್ನ ಗಮನ ಬರೀ ಈ ಸಿನಿಮಾ ಮೇಲೆ ಮಾತ್ರ ಇರುತ್ತದೆ ಎಂದರು.

ಇನ್ನೂ ನಮ್ಮ ಕುಟುಂಬದ ಮತ್ತೊಂದು ವಿಶೇಷವೆಂದರೆ ನಮ್ಮ ತಾತಾ ಸುಬ್ಬಯ್ಯ ನಾಯ್ಡು ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಿದ “ಭಕ್ತ ಪ್ರಹ್ಲಾದ” ಚಿತ್ರದ ಮೂಲಕ ಬಾಲ ಕಲಾವಿದನಾಗಿ ನಮ್ಮ ತಂದೆ ಲೋಕೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ನನ್ನ ತಂದೆ ಲೋಕೇಶ್ ಅವರು ತಮ್ಮ ನಿರ್ಮಾಣದ ಹಾಗೂ ನಿರ್ದೇಶನದ “ಬುಜಂಗಯ್ಯನ ದಶಾವತಾರಗಳು” ಚಿತ್ರದ ಮೂಲಕ ನನ್ನನ್ನು ಬಾಲನಟನಾಗಿ ಚಿತ್ರರಂಗಕ್ಕೆ ಕರೆತಂದರು. ಈಗ ನಾನು ನಿರ್ಮಿಸಿ, ನಿರ್ದೇಶಿಸುತ್ತಿರುವ “ಜಿ.ಎಸ್.ಟಿ” ಚಿತ್ರದ ಮುಖಾಂತರ ನನ್ನ ಮಗ ಸುಕೃತನನ್ನು ಬೆಳ್ಳತೆರೆಗೆ ಪರಿಚಯಿಸುತ್ತಿದ್ದೇನೆ. ಇದು ಸಾಧ್ಯವಾಗುವುದು ನಮ್ಮ ಭಾರತೀಯ ಚಿತ್ರರಂಗದಲ್ಲಿ ಮಾತ್ರ ಎಂದು ಸೃಜನ್ ಲೋಕೇಶ್ ತಿಳಿಸಿದರು.

ಹಿರಿಯ ನಿರ್ದೇಶಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಗಿರೀಶ್ ಕಾಸರವಳ್ಳಿ, ಯೋಗರಾಜ್ ಭಟ್, ಹಿರಿಯ ಪತ್ರಕರ್ತೆ ಡಾ|ವಿಜಯ, ನಟಿ ಜಯಮಾಲ, ರಂಗತಜ್ಞ ಶ್ರೀನಿವಾಸ್ ಜಿ ಕಪ್ಪಣ್ಣ, ಪತ್ರಕರ್ತ ಚ‌.ಹ.ರಘುನಾಥ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿ ಸೃಜನ್ ಲೋಕೇಶ್ ಹಾಗೂ ಪಿ‌.ಶೇಷಾದ್ರಿ ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಕೋರಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!