`ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ ಎನ್ನುವ ಮಾತೇ ಎಲ್ಲರ ಮನಕ್ಕೆ ಮುದ ನೀಡುವಂಥದ್ದು. ಯಾವುದೇ ಜಾತಿ-ಮತ-ಪಂಥ-ಲಿಂಗ ಭೇದಭಾವವಿಲ್ಲದೆ ಸಮ ಸಮಾಜದ ಸದೃಢತೆಯನ್ನು ಕಟ್ಟಿದ ಸಂಸ್ಕೃತಿ ಬಸವ ಸಂಸ್ಕೃತಿ. ಅಂತರಂಗ-ಬಹಿರಂಗ ಶುದ್ಧಿಯ ಮಾರ್ಗವನ್ನು ತೋರಿ ಮನುಷ್ಯನಾಗಿ ಬಾಳಲು ಬೇಕಾದ ಎಲ್ಲ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಶರಣರು ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕೂ ಅವಶ್ಯ ಹಾಗೂ ಅನಿವಾರ್ಯವೂ ಕೂಡ.
ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಮೂಲ ಶರಣ ಸಂಸ್ಕೃತಿಯನ್ನೇ ಮರೆತು ನಡೆಯುವ ಮನುಜನಿಗೆ ಹಿಂದಿಗಿಂತಲೂ ಇಂದು ಶರಣ ಸಂಸ್ಕೃತಿಯ ಅನಾವರಣ ಅವಶ್ಯವಾಗಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಜಗಜ್ಯೋತಿ ಬಸವಣ್ಣನವರನ್ನು `ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇದೊಂದು ಐತಿಹಾಸಿಕ ಘಟನೆಯನ್ನು ನಾಡಿನಾದ್ಯಂತ ಪ್ರತಿಯೊಬ್ಬರ ಮನೆ ಮನಗಳಿಗೆ ಶರಣ ಸಂಸ್ಕೃತಿಯ ವಿಚಾರಧಾರೆಗಳನ್ನು ತಲುಪಿಸುವ ಅಭಿಯಾನವಾಗಿದೆ.
ಈ ಅಭಿಯಾನವು ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಿಂದ 2025ರ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಿ ಅಕ್ಟೋಬರ್ 5ಕ್ಕೆ ಬೆಂಗಳೂರಿನಲ್ಲಿ ಸಮಾರೋಪಗಳ್ಳಲಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಸಂಚರಿಸಿ ಶರಣ ಸಂಸ್ಕೃತಿಯ ಎಲ್ಲಾ ಪೂಜ್ಯರು, ಶರಣ ಬಂಧುಗಳು, ಸಮಸ್ತ ಬಸವ ಪರ ಸಂಘಟನೆಗಳು ಒಟ್ಟಾಗಿ ಈ ಅಭಿಯಾನದ ಆಶಯಗಳನ್ನು ಯಶಸ್ವಿಗೊಳಿಸುತ್ತಿವೆ. ಅಭಿಯಾನದ ಮುಖ್ಯ ಧ್ಯೇಯೋದ್ದೇಶಗಳು ಶರಣರ ವಿಚಾರಧಾರೆಗಳನ್ನು ಬಿತ್ತರಿಸುತ್ತಿವೆ. ವ್ಯಸನ ಮುಕ್ತ ಸಮಾಜದ ನಿರ್ಮಾಣ ಇದರ ಮೂಲ ಆಶಯ. ಅಜ್ಞಾನ, ಅಂಧಕಾರ, ಅಂಧಶ್ರದ್ಧೆ ಇವೆಲ್ಲವುಗಳನ್ನು ಅಳಿಸಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಿ, ಸುಜ್ಞಾನವನ್ನು ಬೆಳೆಸುವುದೇ ಇದರ ತಿರುಳು. ಸದೃಢ ನಾಡನ್ನು ಕಟ್ಟಲು ಸದೃಢ ಯುವ ಜನಾಂಗ ಅವಶ್ಯ. ಹಾಗಾಗಿ ಸದೃಢ ಸಮಾಜಕ್ಕಾಗಿ ಯುವ ಜನಾಂಗವನ್ನು ಸಕಾರಾತ್ಮಕ ಚಿಂತನೆಯ ಕಡೆಗೆ ಪ್ರೇರೇಪಿಸಬೇಕಿದೆ. ಆಧುನಿಕ ಅವಸರದ ಬದುಕಿನಲ್ಲಿ ಕೆಲವೊಮ್ಮೆ ನಮ್ಮತನವನ್ನೇ ಮರೆಯುವ ಸ್ಥಿತಿಯನ್ನು ತಲುಪಿದ್ದೇವೆ. ಇದಕ್ಕೆ ಪರಿಹಾರವಾಗಿ ಮಕ್ಕಳಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವ ಆಶಯ ಈ ಅಭಿಯಾನಕ್ಕಿದೆ.
ಲಿಂಗ ಭೇದವನ್ನು ತೊರೆದು ಮಹಿಳೆಯರ ಘನತೆಯನ್ನು ಗೌರವವನ್ನು ಕಾಪಾಡುವ ಸದುದ್ದೇಶ ಈ ಬಸವ ಸಂಸ್ಕೃತಿ ಅಭಿಯಾನಕ್ಕಿದೆ. ಸರ್ವ ಜನಾಂಗದ ವ್ಯಕ್ತಿತ್ವ ವಿಕಾಸಗೊಂಡಾಗ ಮಾತ್ರ ಸಮಸ್ತ ಕುಲ ಕೋಟಿಯ ಅಭಿವೃದ್ಧಿ ಸಾಧ್ಯ ಎನ್ನುವ ಆಶಯಗಳೊಂದಿಗೆ ಈ ಬಸವ ಸಂಸ್ಕೃತಿ ಅಭಿಯಾನವು ನಾಡಿನಾದ್ಯಂತ ಸಕಾರಾತ್ಮಕ ಸಂಚಲನವನ್ನು ಮೂಡಿಸಿದೆ.
ಗದಗ ಜಿಲ್ಲೆಗೆ ಈ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಸೆ. 9ರಂದು ಮುಂಜಾನೆ 9 ಗಂಟೆಗೆ ಜಗದ್ಗುರು ತೋಂಟದಾರ್ಯ ಇಂಜಿನಿಯರಿಂಗ್ ಮಹಾವಿದ್ಯಾಲಯದ ಮುಂಭಾಗದಿಂದ ಆಗಮಿಸಲಿದ್ದು, ಅಲ್ಲಿಂದ ಬಸವರಥಯಾತ್ರೆಯ ಸ್ವಾಗತ ನಡೆಯಲಿದೆ. ನಂತರ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ಪರಮ ಪೂಜ್ಯರ ಶರಣ ಬಂಧುಗಳ ಸಮ್ಮುಖದಲ್ಲಿ ನೆರವೇರಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರ ಶಿವಾನುಭವ ಮಂಟಪದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಮುಖ ವಿಷಯಗಳನ್ನು ಒಳಗೊಂಡ ಪ್ರಶ್ನೋತ್ತರ ಸಂವಾದ ಕಾರ್ಯಕ್ರಮ ನೆರವೇರಲಿದೆ. ಈ ಸಂವಾದದ ನಂತರ ಶ್ರೀಮಠದಲ್ಲಿ ಪ್ರಸಾದದ ವ್ಯವಸ್ಥೆ, ನಂತರ 4.30 ಗಂಟೆಗೆ ನಾಮ ಜೋಶಿ ರಸ್ತೆಯಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಹಾಗೂ ಬಸವೇಶ್ವರ ಸರ್ಕಲ್‌ನಿಂದ ಜಗದ್ಗುರು ತೋಂಟದಾರ್ಯ ಮಠದವರೆಗೆ ವಚನ ಕಟ್ಟುಗಳನ್ನು ತಲೆಯ ಮೇಲೆ ಹೊರುವ ಮೂಲಕ ವಚನಗಳ ಪಠಣ ದೊಂದಿಗೆ ರಥಯಾತ್ರೆ ಸಾಗಲಿದೆ.
ಈ ರಥಯಾತ್ರೆಯಲ್ಲಿ ಎಲ್ಲಾ ಬಸವಪರ ಸಂಘಟನೆಗಳು, ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಜಾಗತಿಕ ಲಿಂಗಾಯತ ಮಹಾಸಭಾ ಹೀಗೆ ಎಲ್ಲ ಸಮುದಾಯದ ಶರಣ ಬಂಧುಗಳು ಒಟ್ಟಾಗಿ ಸಾಗಲಿದ್ದಾರೆ. ನಂತರ ಸಾಯಂಕಾಲ 6 ಗಂಟೆಗೆ ತೋಂಟದಾರ್ಯ ಮಠದ ಆವರಣದಲ್ಲಿರುವ ಪೂಜ್ಯ ಸಿದ್ದಲಿಂಗೇಶ್ವರ ಶಿವಾನುಭವ ಮಂಟಪದಲ್ಲಿ ಸಭಾ ಕಾರ್ಯಕ್ರಮ ನೆರವೇರಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಾಡಿನಾದ್ಯಂತ ಆಗಮಿಸಲಿರುವ ಎಲ್ಲ ಪರಮಪೂಜ್ಯರ ಸಾನ್ನಿಧ್ಯದಲ್ಲಿ ವಿಶ್ರಾಂತ ಪ್ರಾಚಾರ್ಯರು, ಸಾಹಿತಿಗಳಾದ ಪ್ರೊ. ಚಂದ್ರಶೇಖರ್ ವಸ್ತçದರ ಅಧ್ಯಕ್ಷತೆಯಲ್ಲಿ `ಶಿವ ಚಿಂತೆ-ಶಿವ ಜ್ಞಾನವಿಲ್ಲದ ಮನುಜರು’ ಎನ್ನುವ ವಿಷಯದ ಮೇಲೆ ವಿಶೇಷ ಉಪನ್ಯಾಸ ಹಾಗೂ `ಅಸ್ಪೃಶ್ಯತೆ ನಿವಾರಣೆಗೆ ಶರಣರ ಕೊಡುಗೆ’ ಎನ್ನುವ ವಿಷಯಗಳ ವಿಶೇಷ ಉಪನ್ಯಾಸ ನೆರವೇರಲಿದೆ.
ಇದೇ ಸಭಾ ಕಾರ್ಯಕ್ರಮದಲ್ಲಿ ಲೇಖಕರು, ಶರಣ ಚಿಂತಕರಾದ ಬಸವರಾಜ್ ವೆಂಕಟಾಪುರ ರಚಿಸಿದ `ವಚನ ಶಾಸ್ತ್ರ ಸಾರ ಭಾಗ ಒಂದು’, `ಭಕ್ತಸ್ಥಲ-ಭಾಗ 2ರ ವಚನ ವಿಶ್ಲೇಷಣೆ’ ಎನ್ನುವ ಎರಡು ವಿಶೇಷ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ. ಈ ಎಲ್ಲ ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಅಧ್ಯಕ್ಷ, ಸಂತ ರಾಜಕಾರಣಿ ಡಿ.ಆರ್. ಪಾಟೀಲರು ಎಲ್ಲ ಶರಣ ಬಂಧುಗಳಿಗೆ ಸ್ವಾಗತ ಕೋರಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಕೆ.ಎಸ್. ಚೆಟ್ಟಿ, ಶರಣು ಸಮರ್ಪಣೆಯನ್ನ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ನಿರ್ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾತ್ರಿ 8 ಗಂಟೆಗೆ `ಜಂಗಮದೆಡೆಗೆ’ ಎನ್ನುವ ವಿಶೇಷ ನಾಟಕ ಪ್ರದರ್ಶನಗೊಳ್ಳಲಿದೆ.
ಹೀಗೆ ಒಂದು ದಿನದ ಈ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆ ಎಲ್ಲರ ಮನದಲ್ಲಿ ಶರಣ ಸಂಸ್ಕೃತಿಯನ್ನ ಮತ್ತೊಮ್ಮೆ ಬಿತ್ತರಿಸಲಿವೆ. ಶರಣರ ಅರ್ಥಪೂರ್ಣ ವಿಚಾರಗಳು ನಮ್ಮೆಲ್ಲರ ಬದುಕಿಗೆ ದಾರಿದೀಪ. ಎಲ್ಲರೂ ಒಟ್ಟಾಗಿ ಈ ಬಸವ ಸಂಸ್ಕೃತಿ ಅಭಿಯಾನವನ್ನು ಗದಗ ಜಿಲ್ಲೆಯಲ್ಲಿ ಯಶಸ್ವಿಗೊಳಿಸೋಣ.

– ಪ್ರೊ. ಸುಧಾ ಹುಚ್ಚಣ್ಣವರ.
ಜಿಲ್ಲಾಧ್ಯಕ್ಷರು,
ಕದಳಿ ಮಹಿಳಾ ವೇದಿಕೆ ಗದಗ.



