ನವದೆಹಲಿ: ಭಾರತದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪಳೆಯುಳಿಕೆ ಇಂಧನಕ್ಕಿಂತ ಪಳೆಯುಳಿಕೆಯೇತರ ಹಾಗೂ ನವೀಕರಿಸಬಹುದಾದ ಇಂಧನದ ಪಾಲೇ ಹೆಚ್ಚು ಇದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನದ ಪಾಲು ಶೇ.52.3 ಇದ್ದು, ನವೀಕರಿಸಬಹುದಾದ ಇಂಧನದ ಪಾಲು ಶೇ.50.6 ಆಗಿದೆ. ಪಳೆಯುಳಿಕೆ ಇಂಧನ ಮೂಲಗಳಿಂದ ಶೇ.47.7 ರಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2026ರ ಜನವರಿ ಅಂತ್ಯದ ವೇಳೆಗೆ ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 5,20,511 ಮೆಗಾವ್ಯಾಟ್ ಆಗಿದೆ. ಇದರಲ್ಲಿ 2,48,542 ಮೆಗಾವ್ಯಾಟ್ ಪಳೆಯುಳಿಕೆ ಇಂಧನ ಮೂಲಗಳಿಂದ ಹಾಗೂ 2,71,969 ಮೆಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲು 2,63,189 ಮೆಗಾವ್ಯಾಟ್ ಆಗಿದೆ ಎಂದು ತಿಳಿಸಿದ್ದಾರೆ.
2025–26ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯಕ್ಕೆ 52,536.49 ಮೆಗಾವ್ಯಾಟ್ ಸೇರ್ಪಡೆಯಾಗಿದ್ದು, ಇದರಲ್ಲಿ 43,026.49 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಬಂದಿದೆ.
ಇದಲ್ಲದೆ ಉಷ್ಣಶಕ್ತಿಯಲ್ಲಿ ಕಲ್ಲಿದ್ದಲು ಮೂಲಕ 8,810 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸೇರ್ಪಡೆಯಾಗಿದ್ದು, ಅನಿಲದಿಂದ ಯಾವುದೇ ಸೇರ್ಪಡೆ ಆಗಿಲ್ಲ. ಹೈಡ್ರೋ ವಿದ್ಯುತ್‌ನಲ್ಲಿ 3,370 ಮೆಗಾವ್ಯಾಟ್, ಗಾಳಿ ಶಕ್ತಿಯಿಂದ 4,612.58 ಮೆಗಾವ್ಯಾಟ್, ಸೌರಶಕ್ತಿಯಿಂದ 34,955.24 ಮೆಗಾವ್ಯಾಟ್, ಜೈವಿಕ ಶಕ್ತಿಯಿಂದ 30.61 ಮೆಗಾವ್ಯಾಟ್, ಸಣ್ಣ ಹೈಡ್ರೋದಿಂದ 58.06 ಮೆಗಾವ್ಯಾಟ್ ಹಾಗೂ 700 ಮೆಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಾಗಿದೆ.
ಪಳೆಯುಳಿಕೆ ಇಂಧನ ಮೂಲಗಳಲ್ಲಿ ಕಲ್ಲಿದ್ದಲು 2,21,210 ಮೆಗಾವ್ಯಾಟ್ (ಶೇ.42.5), ಲಿಗ್ನೈಟ್ 6,620 ಮೆಗಾವ್ಯಾಟ್ (ಶೇ.1.3), ಅನಿಲ 20,122 ಮೆಗಾವ್ಯಾಟ್ (ಶೇ.3.9) ಹಾಗೂ ಡೀಸೆಲ್ 589 ಮೆಗಾವ್ಯಾಟ್ (ಶೇ.0.1) ಸೇರಿ ಒಟ್ಟು 2,48,542 ಮೆಗಾವ್ಯಾಟ್ (ಶೇ.47.7) ವಿದ್ಯುತ್ ಉತ್ಪಾದನೆ ಆಗುತ್ತಿದೆ.
ಪಳೆಯುಳಿಕೆಯಲ್ಲದ ಇಂಧನ ಮೂಲಗಳಲ್ಲಿ (ಹೈಡ್ರೋ ಸೇರಿ) ಒಟ್ಟು 2,63,189 ಮೆಗಾವ್ಯಾಟ್ (ಶೇ.50.6) ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದ್ದು, ಇದರಲ್ಲಿ ಹೈಡ್ರೋ 51,165 ಮೆಗಾವ್ಯಾಟ್ (ಶೇ.9.8) ಹಾಗೂ ಪವನ, ಸೌರ ಮತ್ತು ಇತರ ನವೀಕರಿಸಬಹುದಾದ ಮೂಲಗಳಿಂದ 2,12,025 ಮೆಗಾವ್ಯಾಟ್ (ಶೇ.40.7) ಉತ್ಪಾದನೆ ಆಗುತ್ತಿದೆ.
ಇದಲ್ಲದೆ ಗಾಳಿ ಶಕ್ತಿಯಿಂದ 54,650 ಮೆಗಾವ್ಯಾಟ್ (ಶೇ.10.5), ಸೌರಶಕ್ತಿಯಿಂದ 1,40,602 ಮೆಗಾವ್ಯಾಟ್ (ಶೇ.27.0), ಬಯೋಮಾಸ್ ಪವರ್ ಕೋಜೆನೆರೇಶನ್ ಮೂಲಕ 10,757 ಮೆಗಾವ್ಯಾಟ್ (ಶೇ.2.1), ತ್ಯಾಜ್ಯದಿಂದ ಶಕ್ತಿ ಉತ್ಪಾದನೆಯಿಂದ 857 ಮೆಗಾವ್ಯಾಟ್ (ಶೇ.0.2), ಸಣ್ಣ ಜಲ ವಿದ್ಯುತ್ ಸ್ಥಾವರಗಳಿಂದ 5,159 ಮೆಗಾವ್ಯಾಟ್ (ಶೇ.1.0) ಹಾಗೂ 8,780 ಮೆಗಾವ್ಯಾಟ್ (ಶೇ.1.7) ಪರಮಾಣು ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.



