ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಬೆಂಗಳೂರು 57ನೇ ಸಿಸಿಎಚ್ ಕೋರ್ಟ್‌ನಲ್ಲಿ ನಡೆದಿದ್ದು, ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 6 ಮಂದಿ ಆರೋಪಿಗಳು ಹಾಜರಾದರು. ವಿಚಾರಣೆಯ ವೇಳೆ ನ್ಯಾಯಾಧೀಶರು ದೋಷಾರೋಪ ನಿಗದಿಯನ್ನು ನವೆಂಬರ್ 3ಕ್ಕೆ ಮುಂದೂಡಿದ್ದಾರೆ.
ಕೋರ್ಟ್‌ನಲ್ಲಿ ಮಾತನಾಡುವ ವೇಳೆ ನ್ಯಾಯಾಧೀಶರು “ನಾವು ಮಾತನಾಡುತ್ತಿರುವುದು ಕೇಳಿಸುತ್ತಿದೆಯೇ?” ಎಂದು ಕೇಳಿದಾಗ, ನಟ ದರ್ಶನ್ ಹಾಗೂ ಪವಿತ್ರಾ ಗೌಡ “ಕೇಳಿಸುತ್ತಿದೆ” ಎಂದು ಉತ್ತರಿಸಿದರು.
ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿ ಮಾಡುವ ನಿರ್ಧಾರ ಕೈಗೊಂಡಿತ್ತು. ಆದರೆ, ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು, “ನಾವು ಆರೋಪಿಗಳಿಗೆ ಯಾವುದೇ ಸೂಚನೆ ನೀಡಿಲ್ಲ, ವಿಡಿಯೋ ಮೂಲಕ ದೋಷಾರೋಪ ಒಪ್ಪಿಕೊಂಡರೆ ನಂತರ ಸಮಸ್ಯೆಯಾಗಬಹುದು” ಎಂದು ವಾದಿಸಿದರು.
ನವಂಬರ್ 3 ರಂದು ಜೈಲಿನಿಂದ ಹೊರಗೆ ಜಾಮೀನಿನ ಮೇಲೆ ಇರುವ ಆರೋಪಿಗಳು ಕೂಡ ಕಡ್ಡಾಯವಾಗಿ ಖುದ್ದಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ನವಂಬರ್ 3 ರಂದು ವಿಚಾರಣೆಗೆ ಹಾಜರಾಗದಿದ್ದರೇ, ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗುತ್ತೆ ಎಂದು ಕೋರ್ಟ್ ಹೇಳಿದೆ.



