ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ದುರಸ್ಥಿಗೊಳಿಸುವ ನಿಟ್ಟಿನಲ್ಲಿ ಹಾಗೂ ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲು ಕ್ಷೇತ್ರಕ್ಕೆ ವಿಶೇಷ ಅನುದಾನವನ್ನು ಮಂಜೂರಿ ಮಾಡುವಂತೆ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಗುರುವಾರ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮನವಿ ನೀಡಿದರು.
ಈ ವೇಳೆ ಶಾಸಕರು ಸಚಿವರಿಗ ಕ್ಷೇತ್ರದ ರಸ್ತೆಗಳ ಪರಿಸ್ಥಿತಿಯನ್ನು ವಿವರಿಸಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹಳಷ್ಟು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಸದರಿ ರಸ್ತೆಗಳನ್ನು ಕೂಡಲೇ ದುರಸ್ತಿ ಗೊಳಿಸುವುದು ಅವಶ್ಯವಾಗಿದೆ. ಅಲ್ಲದೆ ಬಹುದಿನಗಳಿಂದ ಅನೇಕ ಕಡೆಗಳಲ್ಲಿ ಪ್ರಮುಖ ನೂತನ ರಸ್ತೆಗಳನ್ನು ನಿರ್ಮಾಣ ಮಾಡುವದಕ್ಕೆ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನವನ್ನು ಮಂಜೂರು ಮಾಡಿ ಬಿಡುಗಡೆಗೊಳಿಸುವಂತೆ ಮನವಿ ಮಾಡುವದಾಗಿ ಹೇಳಿದರು.
ಸಚಿವ ಸತೀಶ ಜಾರಕಿಹೊಳಿಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕುರಿತಂತೆ ಸಂಪೂರ್ಣ ಮಾಹಿತಿ ಪಡೆದು ಹಂತ ಹಂತವಾಗಿ ಕ್ಷೇತ್ರಕ್ಕೆ ಅನುದಾನ ಮಂಜೂರಿ ಮಾಡಿ ಅಲ್ಲಿನ ರಸ್ತೆಗಳ ಸುಧಾರಣೆಗೆ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.



