HomeDharwadಕಲುಷಿತ ನೀರು ಸೇವನೆ ವದಂತಿ: ಗುಡಿಸಾಗರ ಗ್ರಾಮದ ಕೆಲವರಲ್ಲಿ ವಾಂತಿ-ಬೇಧಿ

ಕಲುಷಿತ ನೀರು ಸೇವನೆ ವದಂತಿ: ಗುಡಿಸಾಗರ ಗ್ರಾಮದ ಕೆಲವರಲ್ಲಿ ವಾಂತಿ-ಬೇಧಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಸೆ. 9ರ ಸಂಜೆ ಕೆಲವರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ನೀರು ಕುಡಿದು ಅನಾರೋಗ್ಯವಾಗಿದೆ ಎಂದು ಹೇಳಲಾಗಿತ್ತು. ತಕ್ಷಣ ನವಲಗುಂದ ತಾಲೂಕು ಆಸ್ಪತ್ರೆಗೆ ವಾಂತಿ-ಬೇಧಿ ಪೀಡಿತರನ್ನು ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಬುಧವಾರ ಬೆಳಿಗ್ಗೆ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ ಸಿಇಓ ಭುವನೇಶ ಪಾಟೀಲ ಹಾಗೂ ಎಸ್.ಪಿ ಗುಂಜನ್ ಆರ್ಯ ಅವರು ನವಲಗುಂದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥರನ್ನು ಮಾತನಾಡಿಸಿ, ಘಟನೆ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಬೇಕು. ಸ್ವಚ್ಛತೆ, ಶುದ್ಧ ನೀರಿನ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಆಸ್ಪತ್ರೆಗೆ ದಾಖಲಾಗಿರುವವರಿಗೆ ಉತ್ತಮ ಚಿಕಿತ್ಸೆ, ಉಚಿತ ಔಷಧಿ ನೀಡಬೇಕೆಂದು ನಿರ್ದೇಶಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸುಮಾರು 19 ಜನ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗ್ರಾಮಸ್ಥರು ಗ್ರಾಮದ ಕುಡಿಯುವ ನೀರಿನ ಕೆರೆಯಿಂದ ಈ ಘಟನೆ ಆಗಿದೆ ಎಂದು ದೂರಿದ್ದಾರೆ. ಈ ಕುರಿತು ಪರಿಶೀಲಿಸಿ, ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಅವರಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಗ್ರಾಮದ ಕೆರೆ, ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು ಮನೆಹತ್ತಿರದ ನಳದಿಂದ ನೀರು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಗ್ರಾಮದಲ್ಲಿ ನೀರು, ನೈರ್ಮಲ್ಯ, ನೀರನ್ನು ಶುದ್ಧೀಕರಿಸಿ, ಬಳಸುವ ಬಗ್ಗೆ ಜಾಗೃತಿ ಮೂಡಿಸಿ, ಆರೋಗ್ಯ ತಪಾಸಣೆಗಾಗಿ 30 ಜನ ಆಶಾ ಸದಸ್ಯರ ತಂಡ ರಚಿಸಿ, ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ. ಗುಡಿಸಾಗರ ಗ್ರಾಮದಲ್ಲಿ ಸುಮಾರು 1,600 ಮನೆ, ಅಂದಾಜು 2,500 ಜನಸಂಖ್ಯೆ ಇದ್ದು, ನಿನ್ನೆ ಮತ್ತು ಇವತ್ತು ಸೇರಿ 600 ಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಮಾಡಿ ಕುಟುಂಬಗಳ ಆರೋಗ್ಯ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಗುಡಿಸಾಗರ ಆರೋಗ್ಯ ಇಲಾಖೆ ಉಪಕೇಂದ್ರಕ್ಕೆ ತಜ್ಞ ವೈದ್ಯರನ್ನು, ಶುಶ್ರೂಷಕಿಯರನ್ನು ನೇಮಿಸಲಾಗಿದ್ದು, ಗ್ರಾಮಸ್ಥರಿಗೆ ಸ್ಥಳದಲ್ಲಿ ಅಗತ್ಯ ಚಿಕಿತ್ಸೆ ನೀಡಿ, ಔಷಧಿ ವಿತರಿಸಲಾಗುತ್ತದೆ. ನೀರಿನ ಪರೀಕ್ಷಾ ವರದಿ ಬಂದ ತಕ್ಷಣ, ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ನವಲಗುಂದ ತಹಸೀಲ್ದಾರ ಸುಧೀರ ಸಾಹುಕಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ತಾಲೂಕು ವೈದ್ಯಾಧಿಕಾರಿ ಡಾ. ಕರ್ಲವಾಡ, ಗುಡಿಸಾರ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ಗುಡಿಸಲಮನಿ, ಪಿಡಿಓ ಎಸ್.ಎಂ. ಹೂಗಾರ ಸೇರಿದಂತೆ ಇತರರು ಇದ್ದರು.

ಜಿ.ಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಮಂಗಳವಾರ ಸಾಯಂಕಾಲ ಅಚಾನಕ್ಕಾಗಿ ಈ ಘಟನೆ ನಡೆದಿದೆ. ಪ್ರತಿದಿನ ಗ್ರಾಮಸ್ಥರು ಅದೇ ಕೆರೆಯ ಶುದ್ಧಿಕರಿಸಿದ ನೀರು ಕುಡಿಯುತ್ತಾರೆ. ಗ್ರಾಮದ ಆರ್.ಓಗಳನ್ನು ದುರಸ್ತಿಗೊಳಿಸಿ, ಇವತ್ತೇ ಆರಂಭಿಸಲು ಸೂಚಿಸಲಾಗಿದೆ. ಗುಡಿಸಾಗರ ಗ್ರಾಮದಲ್ಲಿ ಮೂರು ಆರ್‌ಓ ಪ್ಲಾಂಟ್‌ಗಳಿದ್ದು, ಸಣ್ಣ ಪುಟ್ಟ ದುರಸ್ತಿ ಇವೆ. ಅವುಗಳಲ್ಲಿ ಒಂದನ್ನು ಇಂದು ದುರಸ್ತಿಗೊಳಿಸಿ, ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದವನ್ನು ತಕ್ಷಣ ಸರಿಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!