ಮಾಸ್ಕೋ: ಮಧ್ಯಪ್ರಾಚ್ಯದ ಯುದ್ಧದ ವಾತಾವರಣದಿಂದ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಇದರ ಪರಿಣಾಮ ಭಾರತೀಯ ತೈಲ ಪೂರೈಕೆ ವಲಯದಲ್ಲಿ ಆರ್ಥಿಕ ಅಪಾಯವನ್ನು ಉಂಟುಮಾಡಿದೆ.
ಈ ಪ್ರದೇಶದಲ್ಲಿ 27 ಭಾರತೀಯ ಹಡಗುಗಳು ಸಿಲುಕಿಕೊಂಡಿದ್ದು, 10,000 ಕೋಟಿಗೂ ಹೆಚ್ಚು ಮೌಲ್ಯದ ಸರಕು ಅಪಾಯದಲ್ಲಿದೆ. ಇದರಿಂದ ತೈಲ ಕೊರತೆಯ ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ತೈಲ ಪೂರೈಕೆಯಲ್ಲಿ ನೆರವಾಗಲು ಸಿದ್ಧವಾಗಿದೆ ಎಂಬ ವರದಿಗಳು ಬಂದಿದೆ.
ಸುಮಾರು 95 ಮಿಲಿಯನ್ ಬ್ಯಾರೆಲ್ ರಷ್ಯನ್ ಕಚ್ಚಾ ತೈಲ ಈಗಾಗಲೇ ಭಾರತೀಯ ಸಮುದ್ರ ಗಡಿಯ ಹಡಗುಗಳಲ್ಲಿ ಲಭ್ಯವಿದ್ದು, ಕೆಲವು ವಾರಗಳಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದೆ. ಮೊದಲ ಹಂತವಾಗಿ 14 ಲಕ್ಷ ಬ್ಯಾರೆಲ್ (22.25 ಕೋಟಿ ಲೀಟರ್) ಹೊತ್ತ 2 ತೈಲ ಟ್ಯಾಂಕರ್‌ಗಳು ಭಾರತ ಕಡೆ ಹೊರಟಿದ್ದು, ಈ ವಾರದಲ್ಲೇ ತಲುಪುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಕ್ರಮಗಳಿಂದ ಮಧ್ಯಪ್ರಾಚ್ಯದ ಪೂರೈಕೆ ವ್ಯತ್ಯಯವನ್ನು ಭಾಗಶಃ ಸಮತೋಲನಗೊಳಿಸಲು ಭಾರತಕ್ಕೆ ಅವಕಾಶ ಸಿಗಲಿದೆ. ಇದೇ ಸಂದರ್ಭ, ಇಂಡಿಯನ್ ನ್ಯಾಷನಲ್ ಶಿಪ್ ಓನರ್ಸ್ ಅಸೋಸಿಯೇಷನ್ ಪತ್ರ ಮೂಲಕ 27 ಹಡಗುಗಳು ಸಿಲುಕಿರುವುದು ಮತ್ತು 10,000 ಕೋಟಿ ಮೌಲ್ಯದ ಸರಕು ಅಪಾಯದಲ್ಲಿ ಇರುವ ಕುರಿತು ಸರ್ಕಾರಕ್ಕೆ ತಿಳಿಸಲಾಗಿದೆ.



