ವಿಜಯಸಾಕ್ಷಿ ಸುದ್ದಿ, ಗದಗ: ಜ್ಞಾನದ ನಿಧಿಯನ್ನು ಒಳಗೊಂಡ ಭಾಷೆ ಸಂಸ್ಕೃತ. ಇದನ್ನು ಸರ್ವರೂ ಅಧ್ಯಯನ ಮಾಡುತ್ತಾ ಮನನ ಮಾಡಿಕೊಳ್ಳಬೇಕು. ಸಂಸ್ಕೃತ ಭಾಷೆ ಅಪಾರ ಜ್ಞಾನ ಸಂಪತ್ತುಳ್ಳ ಭಾಷೆಯಾಗಿದೆ. ಪುಟ್ಟರಾಜ ಗುರುಗಳೂ ಸಹ ಸಂಸ್ಕೃತದಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಈ ಭಾಷೆಯನ್ನು ಕಲಿತ ಸರ್ವರೂ ಸುಸಂಸ್ಕೃತರಾಗಿ ಬಾಳುತ್ತಾರೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಆಶಿರ್ವಚನ ನೀಡಿದರು.
ಗದಗ ನಗರದ ಡಾ. ಪಂ.ಪುಟ್ಟರಾಜ ಗವಾಯಿಗಳ ಸಂಸ್ಕೃತ ಪಾಠಶಾಲೆಯಲ್ಲಿ ಜಿಲ್ಲಾ ಮಟ್ಟದ ಸಂಸ್ಕೃತ ಶ್ರಾವಣಿ ಮತ್ತು ಯುಷ್ಮಾಕಂ ಸಂಸ್ಕೃತ ಸಮಾರೋಪ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರವಾಡ ವಲಯ ಸಂಸ್ಕೃತ ಪಾಠಶಾಲಾ ವಿಷಯ ಪರಿವೀಕ್ಷಕರು ಮತ್ತು ಡಿ.ಜಿ.ಎಂ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಜಿ.ಎಸ್. ಗಾಂವ್ಕರ್ ಮಾತನಾಡಿ, ಹಿಂದಿನಿಂದ ನಡೆಸಿಕೊಂಡು ಬಂದ ಕಾರ್ಯಕ್ರಮವನ್ನು ಮತ್ತಷ್ಟು ಚೆನ್ನಾಗಿ ನಡೆಸಬೇಕು. ಎಲ್ಲ ಸಂಸ್ಕೃತ ಪಾಠಶಾಲೆಗಳ ಶಿಕ್ಷಕರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡು ಸಂಸ್ಕೃತವನ್ನು ಪ್ರಚಾರ-ಪ್ರಸಾರ ಮಾಡಬೇಕು ಎಂದರು.
ಭಾಷಣ, ಕಂಠಪಾಠ, ಪ್ರಬಂಧ ಸ್ಪರ್ಧೆಗಳ ನಿರ್ಣಾಯಕರಾಗಿ ಆಗಮಿಸಿದ್ದ ಜ.ತೋಂಟದಾರ್ಯ ಸಂ.ಪಾ. ನಿವೃತ್ತ ಮುಖ್ಯ ಗುರುಗಳಾದ ಎಸ್.ವಿ. ಹಿರೇಮಠ ನಿವೃತ್ತ ಮುಖ್ಯ ಗುರುಮಾತೆಯರಾದ ಜಯಶ್ರೀ ಮೆಳ್ಳಿಗೇರಿಯವರೊಂದಿಗೆ ಅತ್ಯಂತ ಪರಿಶ್ರಮದಿಂದ ನಿರ್ಣಯ ಕೈಗೊಳ್ಳಲಾಗಿದೆ. ಯಾರಿಗೆ ಬಹುಮಾನ ಬಂದಿಲ್ಲವೋ ಅವರು ಹತಾಶರಾಗದೆ ಮತ್ತೆ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಗಳಿಸುವಿರಿ ಎಂದು ತಿಳಿಸಿದರು.
2025ನೇ ಸಂಸ್ಕೃತ ಪ್ರಸಿದ್ಧ ಪರೀಕ್ಷೆಯಲ್ಲಿ ಸ್ಥಾನ ಪಡೆದವರಿಗೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಜ.ಪಂ. ಪಾಠಶಾಲೆಯ ಮುಖ್ಯ ಶಿಕ್ಷಕರಾದ ಗುರುಶಿದ್ಧಯ್ಯ ಹಿರೇಮಠ ಹಾಗೂ ಬಿ.ಜಿ.ಅ. ಸಂ.ಪಾ ಕಳಕಪ್ಪ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು. ತೋಂಟದಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಎಸ್.ಎನ್. ಶಿಂಪಿಗೇರ ಸ್ವಾಗತಿಸಿದರು. ಗದಗ ಜಿಲ್ಲಾ ಸಂ.ಪಾ.ಶಾ ಸಂಘ ಅಧ್ಯಕ್ಷ ಎಸ್.ಎಸ್. ಸಾಲಿಮಠ ವಂದಿಸಿದರು. ಧಾರವಾಡ ವಲಯ ಸಂಸ್ಕೃತ ಪಾಠಶಾಲೆಗಳ ಸಂಯೋಜಕರು, ಬಿ.ಬಿ. ಆರೇರ ಗುರುಗಳು ಸಂಸ್ಕೃತ ಗೀತೆ ಹಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಪಿ.ಜಿ.ಎ.ಎಸ್ ಸಮಿತಿಯ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಮಾತನಾಡಿ, 1995-96ರಲ್ಲಿ ಉಡುಪಿಯಲ್ಲಿ ಜರುಗಿದ ಸಂಸ್ಕೃತ ಸಮ್ಮೇಳನದಲ್ಲಿ ತ್ರಿಭಾಷಾ ಕವಿಗಳಾದ ಪೂಜ್ಯ ಪುಟ್ಟರಾಜ ಗವಾಯಿಗಳು ಭಾಗವಹಿಸಿದ್ದನ್ನು ಸ್ಮರಿಸಿದರಲ್ಲದೆ, ಸಂಸ್ಕೃತ ಪಾಠಶಾಲೆಗೆ ಸದಾಕಾಲ ನೆರವು ನೀಡುವುದಾಗಿ ತಿಳಿಸಿದರು.



